ಯಾರಿಗೂ ತಿಳಿಯದಂತೆ 8 ದಿನ ಕೇರಳದ ನೆರೆ ಪೀಡಿತರ ಸೇವೆಗೈದ ಐಎಎಸ್ ಅಧಿಕಾರಿ !

Update: 2018-09-06 07:32 GMT

ತಿರುವನಂತಪುರಂ, ಸೆ. 6: ಪ್ರವಾಹ ಪೀಡಿತ ಕೇರಳದಲ್ಲಿ ಎಂಟು ದಿನಗಳ ಕಾಲ ಕಣ್ಣನ್ ಗೋಪಿನಾಥನ್ ಪರಿಹಾರ ಶಿಬಿರಗಳಲ್ಲಿ ಶ್ರಮ ವಹಿಸಿ ದುಡಿದಿದ್ದರು. ಈ ಎಂಟು ದಿನಗಳ ಪೈಕಿ ಎರಡು ದಿನ ಅವರು ಬಂದರು ನಗರಿ ಕೊಚ್ಚಿಯಲ್ಲಿ ಟ್ರಕ್ಕುಗಳಲ್ಲಿ ಆಗಮಿಸಿದ ಪರಿಹಾರ ಸಾಮಗ್ರಿಗಳನ್ನು ತಮ್ಮ ತಲೆಯಲ್ಲಿ ಹೊತ್ತು ಕೆಳಗಿಳಿಸಿದ್ದರು. ಎಲ್ಲರೊಂದಿಗೆ ಒಬ್ಬರಾಗಿ ದುಡಿದ ಇವರು ಐಎಎಸ್ ಅಧಿಕಾರಿಯೆಂದು ಒಂಬತ್ತನೇ ದಿನವಷ್ಟೇ ತಿಳಿದು ಬಂದಿತ್ತಾದರೂ ತಾನು ಬಂದು ಕೆಲಸ ಮಾಡಿದಷ್ಟೇ ಮೌನದಿಂದ ಅವರು ಹಿಂದಿರುಗಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾಗಿರುವ ದಾದ್ರಾ ಮತ್ತು  ನಾಗರ್ ಹವೇಲಿಯ ಜಿಲ್ಲಾ ಕಲೆಕ್ಟರ್ ಆಗಿರುವ ಗೋಪಿನಾಥನ್ 2012 ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, ಆ. 26ರಂದು ಅವರು ಕೇರಳಕ್ಕೆ ಅಧಿಕೃತ ಭೇಟಿ ನೀಡಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದಾದ್ರಾ ನಾಗರ್ ಹವೇಲಿ ವತಿಯಿಂದ ಒಂದು ಕೋಟಿ ರೂ. ಮೊತ್ತದ ಚೆಕ್ ಹಸ್ತಾಂತರಿಸಿದ್ದರು.

ಈ ಕಾರ್ಯ ಮುಗಿದೊಡನೆ, 32 ವರ್ಷದ ಈ ಅಧಿಕಾರಿ ತಿರುವನಂತಪುರಂದಿಂದ ಬಸ್ಸೊಂದರಲ್ಲಿ  ಪ್ರಯಾಣಿಸಿ ಪ್ರವಾಹದಿಂದ ಬಹಳಷ್ಟು ತೊಂದರೆ ಗೀಡಾಗಿದ್ದ ಚೆಂಗನ್ನೂರು ತಲುಪಿ ಅಲ್ಲಿನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದರು.

ಆದರೆ ತಮ್ಮ ಈ ಸಮಾಜ ಸೇವೆಯ ಬಗ್ಗೆ ಮಾತನಾಡಲು ಅವರಿಗೆ ಮನಸ್ಸಿಲ್ಲ. ''ನಾನೇನು ಮಹತ್ಸಾಧನೆ ಮಾಡಿಲ್ಲ. ನೆರೆಪೀಡಿತರ ನಡುವೆ ಇದ್ದುಕೊಂಡು ಕೆಲಸ ಮಾಡುವ ಅಧಿಕಾರಿಗಳೇ ನಿಜವಾದ ಹೀರೋಗಳು'' ಎನ್ನುವ ಇವರು ಎಲ್ಲರೂ ತನ್ನನ್ನು ಐಎಎಸ್ ಅಧಿಕಾರಿ ಎಂದು ಕೊನೆಗೂ ಗುರುತಿಸಿದಾಗ ತನಗೆ ಮುಜುಗರವಾಯಿತು ಹಾಗೂ ಜನರು ಸೆಲ್ಫಿ ತೆಗೆಸಿಕೊಳ್ಳಲು ಹಾತೊರೆದರು ಎಂದಿದ್ದಾರೆ.

ಅವರು ಕೇರಳ ಬುಕ್ಸ್ ಆ್ಯಂಡ್ ಪಬ್ಲಿಕೇಶನ್ಸ್ ಸೊಸೈಟಿ ಕಟ್ಟಡದಲ್ಲಿದ್ದ ಪರಿಹಾರ ಶಿಬಿರದಲ್ಲಿ ಕಾರ್ಯನಿರತರಾಗಿದ್ದಾಗ ಕೇರಳದಲ್ಲಿ ಸೇವೆ ಸಲ್ಲಿಸುತ್ತಿರುವ ಅವರ ಹಿರಿಯ ಬ್ಯಾಚ್ ಮೇಟ್ ಒಬ್ಬರು ಅವರನ್ನು ಗುರುತಿಸಿದ್ದರು.

ದಾದ್ರಾ ನಗರ್ ಹವೇಲಿಗೆ ಹಿಂದಿರುಗಿದ ನಂತರ ತಾವು ಕೇರಳದಲ್ಲಿ ಕಳೆದ ಎಂಟು ದಿನಗಳಿಗಾಗಿ ಅವರು ರಜಾ ಅರ್ಜಿ ಸಲ್ಲಿಸಿದರೂ ಅದು ಅವರ ಅಧಿಕೃತ ಪ್ರವಾಸದ ಭಾಗ ಎಂದು ಆಡಳಿತ ಗುರುತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News