ಸೈಬರ್ ಅಪರಾಧಗಳ ರಾಜಧಾನಿ ಯಾವುದು ಗೊತ್ತಾ ?

Update: 2018-09-06 13:40 GMT

ರಾಂಚಿ, ಸೆ.6: ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ದೂರವಾಣಿ ಕರೆಗಳನ್ನು ಮಾಡಿ ಅಮೂಲ್ಯ ಮಾಹಿತಿಗಳನ್ನು ಪಡೆದುಕೊಂಡು ಅವರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿರುವ ವಂಚಕರ ಬೀಡು ಎಂದು ಕುಖ್ಯಾತಿ ಪಡೆದಿರುವ ಜಾರ್ಖಂಡ್‌ನ ಜಮ್ತಾರಾ ಜಿಲ್ಲೆಯ ಐದು ಸ್ಥಳಗಳಲ್ಲಿ ಗುರುವಾರ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ(ಇಡಿ)ವು ಶೋಧ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಇಡಿ ಇದೇ ಮೊದಲ ಬಾರಿಗೆ ಈ ದಾಳಿಗಳನ್ನು ನಡೆಸಿದೆ.

ಇಡಿಯ ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿರುವ ಕನಿಷ್ಠ ನಾಲ್ವರಿಗೆ ಸೇರಿದ ಐದು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ. ಸೈಬರ್ ವಂಚಕರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪಿಎಂಎಲ್‌ಎ ಅಡಿ ಮೊದಲ ಅಪರಾಧ ಪ್ರಕರಣದ ಭಾಗವಾಗಿ ಇಡಿ ಕಳೆದ ತಿಂಗಳು ಎಫ್‌ಐಆರ್ ದಾಖಲಿಸಿಕೊಂಡಿತ್ತು.

 ಪ್ರದೀಪಕುಮಾರ ಮಂಡಲ್,ಯುಗಲ್ ಮಂಡಲ್ ಮತ್ತು ಸಂತೋಷ ಯಾದವ ಹಾಗೂ ಅವರ ಸಹಚರರ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ಇಡಿ ದಾಖಲಿಸಿಕೊಂಡಿದ್ದು, ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕ್,ಆರ್‌ಬಿಐ ಮತ್ತು ಸೆಬಿ ಅಧಿಕಾರಿಗಳ ಹೆಸರಿನಲ್ಲಿ ಹಲವಾರು ಜನರಿಗೆ ದೂರವಾಣಿ ಕರೆಗಳನ್ನು ಮಾಡಿ ಅವರ ಪ್ರಮುಖ ಬ್ಯಾಂಕಿಂಗ್ ಮಾಹಿತಿಗಳನ್ನು ಪಡೆದುಕೊಂಡು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ವಂಚಿಸಿದ್ದಾರೆ. ಇವರಲ್ಲಿ ಪ್ರತಿಯೊಬ್ಬರೂ ಸುಮಾರು ಒಂದು ಕೋಟಿ ರೂ.ಗಳಷ್ಟು ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇಂತಹ ಅಪರಾಧಗಳ ಕೇಂದ್ರಬಿಂದುವಾಗಿರುವ ಜಾರ್ಖಂಡ್‌ನ ಪುಟ್ಟ ಪಟ್ಟಣ ಜಮ್ತಾರಾ ‘ಭಾರತದ ಸೈಬರ್ ಅಪರಾಧಗಳ ರಾಜಧಾನಿ’ ಎಂಬ ಕುಖ್ಯಾತಿಯನ್ನು ಪಡೆದಿದೆ. ಗಿರಿಧಿ,ಡುಮ್ಕಾ ಮತ್ತು ದೇವಘಡ್‌ನಂತಹ ಜಮ್ತಾರಾದ ಸುತ್ತುಮುತ್ತಲಿನ ಪಟ್ಟಣಗಳಲ್ಲೂ ಈ ಇ-ಅಪರಾಧಗಳು ನಡೆಯುತ್ತಿವೆ. ಇದು ಇಡೀ ರಾಜ್ಯಕ್ಕೆ ಕಳಂಕವನ್ನು ತರುತ್ತಿದೆ ಎಂದು ಇಡಿ ಅಧಿಕಾರಿಯೋರ್ವರು ತಿಳಿಸಿದರು.

ರಾಜ್ಯ ಪೊಲೀಸರು ಈ ವಂಚಕರ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದರು. ಇಡಿ ಈಗ ಈ ಪ್ರಕರಣಗಳನ್ನು ಪಿಎಂಎಲ್‌ಎ ಅಡಿ ಹಸ್ತಾಂತರಿಸಿಕೊಂಡಿದ್ದು,ಅವರ ಆಸ್ತಿಗಳನ್ನು ಸ್ತಂಭನಗೊಳಿಸಲು ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.

ಆರೋಪಿಗಳು ಹಲವಾರು ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದರು ಮತ್ತು ಅಪರಾಧದ ಬಳಿಕ ಅವುಗಳನ್ನು ವಿಲೇವಾರಿಗೊಳಿಸುತ್ತಿದ್ದರು. ನಕಲಿ ಕೆವೈಸಿಗಳನ್ನು ನೀಡಿ ಬೇನಾಮಿ ಹೆಸರುಗಳಲ್ಲಿ ತೆಗೆಯಲಾದ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಇದಕ್ಕಾಗಿ ಅವರು ವಿವಿಧ ಬ್ಯಾಂಕುಗಳ ವ್ಯಾಲೆಟ್‌ಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ಅಧಿಕಾರಿ ತಿಳಿಸಿದರು.

ಭಾರತದಲ್ಲಿಯ ಅರ್ಧಕ್ಕೂ ಹೆಚ್ಚಿನ ಸೈಬರ್ ಅಪರಾಧಗಳ ಹಿಂದೆ ಸಂತಾಲ್ ಪರಗಣ ಪ್ರದೇಶದ ಜಮ್ತಾರಾದ ವಂಚಕರ ಕೈವಾಡವಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗಾಬಾ ಅವರು ಕಳೆದ ಮೇ ತಿಂಗಳಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ತಿಳಿಸಿದ್ದರು.

ಈ ಖನಿಜ ಸಮೃದ್ಧ ಪ್ರದೇಶವು ಸಣ್ಣಪುಟ್ಟ ಅಪರಾಧಿಗಳು ಮತ್ತು ಠಕ್ಕರಿಂದಾಗಿ ಕುಖ್ಯಾತಗೊಂಡಿದ್ದು,ಈ ಹಿಂದೆ ರೈಲು ಪ್ರಯಾಣಿಕರಿಗೆ ಮಾದಕ ದ್ರವ್ಯ ನೀಡಿ ಅವರನ್ನು ದೋಚುವುದು,ಕಲ್ಲಿದ್ದಲು ಮತ್ತು ಇತರ ಖನಿಜಗಳ ಕಳ್ಳತನ ಅವರ ಕಾರ್ಯತಂತ್ರವಾಗಿತ್ತು ಎಂದೂ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News