ತೆಂಗಿನ ಎಣ್ಣೆ ಶುದ್ಧ ವಿಷ ಎಂಬ ಹೇಳಿಕೆ ಹಿಂಪಡೆಯುವಂತೆ ಅಮೆರಿಕ ಉಪನ್ಯಾಸಕಿಗೆ ಭಾರತ ಆಗ್ರಹ

Update: 2018-09-06 13:41 GMT

ಹೊಸದಿಲ್ಲಿ, ಸೆ.6: ತೆಂಗಿನ ಎಣ್ಣೆ ಒಂದು ಶುದ್ಧ ವಿಷ ಎಂಬ ಹೇಳಿಕೆಯನ್ನು ಹಿಂಪಡೆಯುವಂತೆ ಅಮೆರಿಕದ ಸೋಂಕುಶಾಸ್ತ್ರಜ್ಞೆ ಮತ್ತು ಉಪನ್ಯಾಸಕಿ ಕರಿನ್ ಮಿಶೆಲ್ಸ್ ಅವರನ್ನು ಭಾರತ ಆಗ್ರಹಿಸಿದೆ.

ಮಿಶೆಲ್ಸ್ ಜರ್ಮನಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಪೌಷ್ಠಿಕತೆ ಬಗ್ಗೆ ಉಪನ್ಯಾಸ ನೀಡಿದ್ದರು. ಈ ವೇಳೆ ಅವರು ತೆಂಗಿನ ಎಣ್ಣೆ ಒಂದು ಶುದ್ಧ ವಿಷವಾಗಿದ್ದು ನಾವು ತಿನ್ನಬಹುದಾದ ಅತ್ಯಂತ ಕೆಟ್ಟ ಆಹಾರವಾಗಿದೆ ಎಂದು ತಿಳಿಸಿದ್ದರು. ಅವರ ಈ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಈ ಕುರಿತು ಹಾರ್ವರ್ಡ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಮುಖ್ಯಸ್ಥರಿಗೆ ಪತ್ರ ಬರೆದಿರುವ ತೋಟಗಾರಿಕಾ ಆಯುಕ್ತ ಬಿ.ಎನ್. ಶ್ರೀನಿವಾಸ ಮೂರ್ತಿ, ಮಿಶೆಲ್ ಅವರ ಹೇಳಿಕೆಯನ್ನು ಪ್ರಮಾಣೀಕರಿಸಲು ಮತ್ತು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಲಕ್ಷಾಂತರ ಜನರು ಪವಿತ್ರ ಎಂದು ಭಾವಿಸುವ ತೆಂಗಿನ ಎಣ್ಣೆಯ ಬಗ್ಗೆ ಮಿಶೆಲ್ ಋಣಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. 2011ರಿಂದೀಚೆಗೆ ಅಮೆರಿಕದಲ್ಲಿ ತೆಂಗಿನ ಎಣ್ಣೆಯ ಅಗಾಧ ಆರೋಗ್ಯ ಲಾಭಗಳ ಬಗ್ಗೆ ಜನರಲ್ಲಿ ಜಾಗೃತಿ ಉಂಟಾಗಿ ಅಲ್ಲಿ ಅದನ್ನು ಸೂಪರ್ ಫೂಡ್ ಎಂದೇ ಪರಿಗಣಿಸಲಾಗುತ್ತಿದೆ. ಅಲ್ಲಿನ ಜನರು ತೆಂಗಿನ ಎಣ್ಣೆಯನ್ನು ತಮ್ಮ ಕಾಫಿಯಲ್ಲೂ ಬಳಸುತ್ತಾರೆ.

ತೆಂಗಿನ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬು ಅತಿಯಾಗಿದ್ದು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಎಚ್ಚರಿಸಿದೆ.

ಈ ಕುರಿತು ಯಾವುದೇ ಹೇಳಿಕೆ ನೀಡಲು ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಿರಾಕರಿಸಿದೆ. ಕರಿನ್ ಮಿಶೆಲ್ ಕೂಡಾ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂದು ಮೂರ್ತಿ ತಿಳಿಸಿದ್ದಾರೆ. ಮಿಶೆಲ್ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಕೋರಿ ತಾನೂ ಪತ್ರ ಬರೆಯುವುದಾಗಿ ಕೇರಳದ ಕೃಷಿ ಸಚಿವ ವಿ.ಎಸ್. ಸುನೀಲ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News