ಸಿ.ಎಂ ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ: ಯಡಿಯೂರಪ್ಪ

Update: 2018-09-06 13:41 GMT

ಬೆಂಗಳೂರು, ಸೆ. 6: ನನ್ನ ಪುತ್ರ ವಿಜಯೇಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿರುವುದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಗುರುವಾರ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನ್ನ ಪುತ್ರ ಐಟಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆಂಬ ಸಿಎಂ ಹೇಳಿಕೆ ಸಲ್ಲ. ಈ ಬಗ್ಗೆ ಅವರು ದಾಖಲೆ ಒದಗಿಸಬೇಕು ಎಂದು ಆಗ್ರಹಿಸಿದರು.

ಸಿಎಂ ಸ್ಥಾನದಲ್ಲಿರುವವರು ಈ ರೀತಿ ಆಧಾರ ರಹಿತ ಆರೋಪ ಮಾಡುವುದು ಶೋಭೆ ತರುವುದಿಲ್ಲ. ಈಗಾಗಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಈ ಕುರಿತು ಸ್ಪಷ್ಟಣೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನತೆ ಕ್ಷಮೆ ಕೇಳಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

ಬೇಜವಾಬ್ದಾರಿ ಹೇಳಿಕೆ ನೀಡುವವರು ಸಿಎಂ ಸ್ಥಾನದಲ್ಲಿ ಮುಂದುವರಿಯುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಕುಮಾರಸ್ವಾಮಿಯವರ ಉದ್ದೇಶವೇನು ಎಂಬುದು ಸ್ಪಷ್ಟ. ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸುವೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News