ಎಸ್ಸಿ/ಎಸ್ಟಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಬಿಜೆಪಿ ತೊರೆಯಲು ಮುಂದಾದ ಮಾಜಿ ಶಾಸಕ

Update: 2018-09-06 14:01 GMT

ಭೋಪಾಲ್, ಸೆ.6: ಎಸ್ಸಿ/ಎಸ್ಟಿ (ದೌರ್ಜನ್ಯ) ತಡೆ ಕಾಯ್ದೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಮಾಡಿರುವ ಮಾರ್ಪಾಟನ್ನು ತೆಗೆದು ಹಾಕಿ ಈ ಕಾಯ್ದೆಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ಕೇಂದ್ರ ಸರಕಾರ ಮಾಡಿರುವ ತಿದ್ದುಪಡಿಯನ್ನು ವಿರೋಧಿಸಿ ಬಿಜೆಪಿ ತೊರೆಯುವುದಾಗಿ ಮಾಜಿ ಶಾಸಕ ಲಕ್ಷ್ಮಣ್ ತಿವಾರಿ ಗುರುವಾರ ಘೋಷಿಸಿದ್ದಾರೆ.

ಎಸ್ಸಿ/ಎಸ್ಟಿ ಕಾಯ್ದೆಯಡಿಯಲ್ಲಿರುವ ಕಡ್ಡಾಯ ಬಂಧನದ ನಿಬಂಧನೆಯನ್ನು ಸರ್ವೋಚ್ಚ ನ್ಯಾಯಾಲಯ ಈ ವರ್ಷಾರಂಭದಲ್ಲಿ ತೆಗೆದುಹಾಕಿತ್ತು. ಈ ಆದೇಶದ ವಿರುದ್ಧ ಎಸ್ಸಿ/ಎಸ್ಟಿ ಪರ ಸಂಘಟನೆಗಳು ದೇಶವ್ಯಾಪಿ ಮುಷ್ಕರ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿದ ಕೇಂದ್ರ ಸರಕಾರ ಲೋಕಸಭೆಯ ಮುಂಗಾರಿನ ಅಧಿವೇಶನದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ತಿರಸ್ಕರಿಸಿ ಕಾಯ್ದೆಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ತಿದ್ದುಪಡಿ ತಂದಿತ್ತು. ಕೇಂದ್ರ ಈ ನಿರ್ಧಾರವನ್ನು ವಿರೋಧಿಸಿ ಗುರುವಾರ ಹಲವು ಸಂಘಟನೆಗಳು ಭಾರತ್ ಬಂದ್ ನಡೆಸಿದವು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡುವ ಲಕ್ಷ್ಮಣ್ ತಿವಾರಿ, ಜನರನ್ನು ಕೇವಲ ಸಂಶಯದ ಮೇಲೆ ಜೈಲಿಗಟ್ಟುವುದು ದೌರ್ಜನ್ಯ ಎಂದು ತಿಳಿಸಿದ್ದಾರೆ.

ಉಮಾ ಭಾರತಿ ಸ್ಥಾಪಿಸಿದ ಭಾರತೀಯ ಜನಶಕ್ತಿ ಪಕ್ಷದಿಂದ ಮಧ್ಯಪ್ರದೇಶದ ರೇವಾ ಜಿಲ್ಲೆಯ ವೌಗಂಜ್ ವಿಧಾನಸಭಾ ಕ್ಷೇತ್ರದಿಂದ ತಿವಾರಿ 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಎಸ್ಸಿ/ಎಸ್ಟಿಯ ಕೆನೆಪದರಕ್ಕೆ ಸೇರಿದ ಸದಸ್ಯರು ತಮ್ಮದೇ ಸಮುದಾಯದಲ್ಲಿರುವ ಬಡಜನರಿಗೆ ಅನ್ಯಾಯವೆಸಗುತ್ತಿದ್ದಾರೆ. ಎಸ್ಸಿ/ಎಸ್ಟಿ ಕಾಯ್ದೆಗೆ ಕೇಂದ್ರ ತಂದಿರುವ ತಿದ್ದುಪಡಿಯನ್ನು ತೊಡೆದುಹಾಕಿ ಆರ್ಥಿಕ ಸ್ಥಿತಿಯ ಆಧಾರದಲ್ಲಿ ಮೀಸಲಾತಿ ನೀಡಬೇಕು ಎಂಬುದು ನನ್ನ ಆಗ್ರಹವಾಗಿದೆ ಎಂದು ತಿವಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News