ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ಕೋರ್ಟ್ ತೀರ್ಪಿಗೆ ಸ್ವಾಗತ

Update: 2018-09-06 14:26 GMT

ಬೆಂಗಳೂರು,ಸೆ.6: ಸಲಿಂಗಕಾಮ ಅಪರಾಧ ಅಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಲೈಂಗಿಕ ಕಾರ್ಯಕರ್ತರ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಒಕ್ಕೂಟ (CSMR) ಸ್ವಾಗತಿಸಿದೆ.

'ಐಪಿಸಿ 377ರ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಅತೀವ ಸಂತಸ ಮತ್ತು ಸಂಭ್ರಮದಿಂದ ನಾವು ಸ್ವಾಗತಿಸುತ್ತಿದ್ದೇವೆ. ಲೈಂಗಿಕತೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಇರುವ ಈ ತೀರ್ಪು ಈ ಸಮುದಾಯಕ್ಕೆ ಸಂವಿಧಾನಾತ್ಮಕ ರಕ್ಷಣೆ ಮತ್ತು ಪೌರ ಹಕ್ಕುಗಳನ್ನು ಕೊಡುತ್ತದೆ. ಪ್ರಭುತ್ವ ಇತರ ಪೌರ ಸ್ವತಂತ್ರಗಳನ್ನು ಮತ್ತು ವಿರೋಧವನ್ನು ತುಂಬಾ ತೀವ್ರವಾಗಿ ಖಂಡಿಸಿ ಶಿಕ್ಷೆಗೆ ಈಡು ಮಾಡುತ್ತಿರುವ ಈ ಸಮಯದಲ್ಲಿ ಈ ತೀರ್ಪು ಒಂದು ಮಹತ್ವದ ಹೆಜ್ಜೆ ಮುಂದೆ ಇಟ್ಟಿದೆ' ಎಂದು ತಿಳಿಸಿದ್ದಾರೆ.

ಎಲ್‍ಜಿಬಿಟಿಕ್ಯ್‍ಐ ಸಮುದಾಯದ ಪ್ರೀತಿ ಪ್ರೇಮಗಳನ್ನು, ಸಂಬಂಧಗಳನ್ನು ಮತ್ತು ಜೀವನಗಳನ್ನು ಐಪಿಸಿ ಕಲಂ 377 ಅಪರಾಧೀಕರಿಸಿರುವ ಹಿನ್ನೆಲೆಯಲ್ಲಿ ಇದರ ವಿರುದ್ಧ ಹೋರಾಟ ಅನೇಕ ಕಾಲದಿಂದ ನಡೆದು ಬಂದು ಕಡೆಗೆ ಈ ಮಹತ್ತರ ತೀರ್ಪು ಒಂದು ಮೈಲಿಗಲ್ಲಾಗಿದೆ. ಈ ಹೋರಾಟದಲ್ಲಿ ನಮ್ಮ ಪ್ರಗತಿಪರ ಬೆಂಬಲಿಗರು ಸಮುದಾಯದವರು ಅನೇಕ ರೀತಿಯಲ್ಲಿ ತ್ಯಾಗ ಮಾಡಿ ಜೀವಗಳನ್ನೇ ಕೊಟ್ಟಿರುವುದನ್ನು ಇಂದು ನಾವು ನೆನೆಯಲೇ ಬೇಕು. 

ಈ ತೀರ್ಪು ಸಂವಿಧಾನದಲ್ಲಿ ಎಲ್ಲಾ ಪ್ರಜೆಗಳಿಗೆ ಕೊಟ್ಟಿರುವ ಹಕ್ಕುಗಳನ್ನು ಮರುಸಾಬೀತು ಮಾಡಿದೆ. ಪ್ರತೀ ಮನುಷ್ಯರಿಗೆ ತಮ್ಮದಾಗಿರುವ ಹಕ್ಕುಗಳಾದ ಸ್ವತಂತ್ರ, ಸ್ವಾಯತ್ತತೆ. ಮತ್ತು ಘನತೆಯನ್ನು ಬಹುಸಂಖ್ಯಾತರ ಸ್ವಾಚ್ಛೆಗೆ ಬಿಟ್ಟುಕೊಡಲಾಗದೆಂದು ಶಕ್ತವಾಗಿ ನೆನಪಿಸುತ್ತದೆ ಈ ತೀರ್ಪು. ಭಾರತೀಯ ಸಂವಿಧಾನದ ಸಮಯಾತೀತ ನಿತ್ಯಹರಿತ ಲಕ್ಷಣಗುಳನ್ನು ಎಲ್ಲಾ ಐದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ತೋರಿಸಿಕೊಟ್ಟಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಕಲ್ಪನೆಯಂತೆ ಸಮಾನತೆ, ಸಮತೆ ಮತ್ತು ತಾರತಮ್ಯ ರಹಿತ ಜೀವನ ಇಂದು ಸತ್ಯಕ್ಕೆ ಹತ್ತಿರವಾಗಿದೆ. ಈ ತೀರ್ಪು ಭಾರತ ಸರ್ಕಾರಕ್ಕೆ ಅದರ ಅಧಿಕಾರಿಗಳಿಗೆ, ಪೊಲೀಸ್, ಮತ್ತು ಆರೋಗ್ಯ ಸೇವೆ ಕೊಡುವ ಅಧಿಕಾರಿಗಳನ್ನು ಸಮಯಾಸಮಯಕ್ಕೆ ಸೂಕ್ಷ್ಮೀಕರಿಸಲು ಬಾಧ್ಯತೆ ಕೊಡುತ್ತದೆ.

ಮಾಧ್ಯಮಗಳಿಗೆ ಈ ತೀರ್ಪಿನ ಬಗ್ಗೆ ಹೆಚ್ಚು ಪ್ರಚಾರ ಮಾಡಲು ನಿರ್ದೇಶಿಸುತ್ತದೆ. ಆದರೆ ಈ ಚಳುವಳೀ ಇಲ್ಲಿಗೇ ನಿಲ್ಲುವುದಿಲ್ಲ. ಇನ್ನೂ ಅನೇಕ ಹೊರಾಟಗಳನ್ನು ಸಾಮಾಜಿಕ ಒಪ್ಪಿಗೆ ಮತ್ತು ಸಂಪೂರ್ಣ ಪೌರತ್ವಕ್ಕೆ ಮುಂದುವರೆಸ ಬೇಕಾಗಿದೆ. ಐಪಿಸಿ 377 ವ್ಯವಸ್ತಿತ ತಾರತಮ್ಯದ ( ಹೋಮೋಫೋಬಿಯಾ) ಮುಖವಾಗಿತ್ತು. ಈ ತೀರ್ಪು ಈ ವ್ಯವಸ್ತಿತ ತಾರತಮ್ಯಕ್ಕೆ ಒಂದು ಗತಿಕಾಣಿಸಿ, ಸಮಾನತೆ ಹಾಗು ಗೌರವಕ್ಕೆ ಹಮ್ಮಿಕೊಂಡಿರುವ ನಮ್ಮ ಹೋರಾಟಕ್ಕೆ ಬೆಂಬಲವಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News