ಸ್ಥಳೀಯ ಸಂಸ್ಥೆಯಲ್ಲೂ ಮೈತ್ರಿ ಮುಂದುವರಿಕೆ: ಡಾ.ಜಿ.ಪರಮೇಶ್ವರ್

Update: 2018-09-07 10:22 GMT

ಬೆಂಗಳೂರು, ಸೆ.7: ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್‌ ಮೈತ್ರಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಸದಾಶಿವ ನಗರ ಬಿಡಿಎ ಕಚೇರಿಯಲ್ಲಿ ಎಲ್ಲ ಸಚಿವರು ಹಾಗೂ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.‌ ಕೆಲವೆಡೆ ಅತಂತ್ರ ಸ್ಥಿತಿ ಇದೆ. ಹೀಗಾಗಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಅಲ್ಲಿಯೂ ನಾವೇ ಅಧಿಕಾರ ನಡೆಸಲು ನಿರ್ಧರಿಸಿದ್ದೇವೆ ಎಂದರು.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ, ಎಲ್ಲ ಜಿಲ್ಲಾ ಸಚಿವರುಗಳು ತಮ್ಮ‌ ಕ್ಷೇತ್ರಗಳಿಗೆ ತೆರಳುವಂತೆಯೂ ಸೂಚನೆ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ ಇದೆ. ಈ ಬಗ್ಗೆ ಹೆಚ್ಚು ಗಮನ ನೀಡಿ, ಸಮಸ್ಯೆ ಆಲಿಸಲು ಜಿಲ್ಲೆಗಳಿಗೆ ತೆರಳುವಂತೆ ಹೇಳಲಾಗಿದೆ. ಅಂತಯೇ, ಚುನಾವಣೆ ಸಂಬಂಧಿಸಿ ಈಗಿಂದಲೇ ತಯಾರಿ ನಡೆಸಲು ನಿರ್ದೇಶನ ನೀಡಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.

ಈ ಸಂದರ್ಭ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿ.ಕೆ. ಶಿವಕುಮಾರ್, ಝಮೀರ್ ಅಹ್ಮದ್, ಶಿವಾನಂದ ಪಾಟೀಲ್, ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ ಇತರರು ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News