ಬಿಡಿಎ ಅಪಾರ್ಟ್‌ಮೆಂಟ್ ಖರೀದಿದಾರರಿಗೆ ಆಫರ್: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

Update: 2018-09-07 10:32 GMT

ಬೆಂಗಳೂರು, ಸೆ.7: ಮೈಸೂರು ರಸ್ತೆ ಭಾಗದಲ್ಲಿ ಬಿಡಿಎ ನಿರ್ಮಿಸಿರುವ ಬಿಡಿಎ ಅಪಾರ್ಟ್‌ಮೆಂಟ್ ಖರೀದಿಗೆ ಮುಂದಾಗುವ ಸಾರ್ವಜನಿಕರಿಗೆ ಶೇ.5ರಷ್ಟು ಹಾಗೂ ಒಮ್ಮೆಲೆ 10ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್ ಖರೀದಿಸುವವರಿಗೆ ಶೇ.10ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಬಿಡಿಎ ಕಚೇರಿಯಲ್ಲಿ ನಡೆದ ಬಿಡಿಎ ಆಡಳಿತ ಮಂಡಳಿ ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ಮೈಸೂರು ರಸ್ತೆ ಭಾಗದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿದ್ದು, ಇದರ ಖರೀದಿಗೆ ಮುಂದಾಗುವವರಿಗೆ ಆಫರ್ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಶೀಘ್ರವೇ ಅಪಾರ್ಟ್‌ಮೆಂಟ್ ಖರೀದಿಯಾದರೆ‌ ಮುಂದಿನ ಪ್ರಾಜೆಕ್ಟ್ ಕೈಗೊಳ್ಳಲು ಸಾಧ್ಯ. ಹೀಗಾಗಿ ರಿಯಾಯಿತಿ ಘೋಷಿಸಿದ್ದೇವೆ ಎಂದರು. 

ಡಾ.ಶಿವರಾಂ ಕಾರಂತರ ಬಡಾವಣೆ 17 ಗ್ರಾಮಗಳಲ್ಲಿ 3,564 ಎಕರೆ ಜಮೀನು ಸ್ವಾಧೀನ ಮಾಡಿ, ಸಾರ್ವಜನಿಕರಿಗೆ ನಿವೇಶನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.‌ ಈ ಪ್ರಕರಣ ಕುರಿತು ಸುಪ್ರೀಂಕೋರ್ಟ್ ಮೂರು ತಿಂಗಳೊಳಗೆ ನೋಟಿಫೈ ಮಾಡಲು ಆದೇಶ ನೀಡಿತ್ತು. ಅಂತೆಯೇ, ನಿವೇಶನ ಹಂಚಿಕೆ ಸಂಬಂಧ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಿ, ಸಚಿವ ಸಂಪುಟದಿಂದ ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದು ಹೇಳಿದರು. 

ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ. 65 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂ. ಅಂದಾಜು ಮಾಡಲಾಗಿದೆ. ಜೈಕಾ ಕಂಪೆನಿಯ ಸಹಯೋಗದೊಂದಿಗೆ ಈ ಯೋಜನೆ ಕಾರ್ಯಗತವಾಗಲಿದೆ ಎಂದವರು ತಿಳಿಸಿದರು.

ಹಳೆ ಮದ್ರಾಸ್ ರಸ್ತೆ ಕೋಣದಾಸಪುರದ ಬಳಿ 165 ಎಕರೆಯಲ್ಲಿ ಇನೋವೇಟಿವ್ ಸಿಟಿ ನಿರ್ಮಾಣಕ್ಕೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಹಿಂದಿನ ಸರಕಾರದಲ್ಲಿಯೇ ಈ ಸಂಬಂಧ ಪ್ರಸ್ತಾವ ಸಲ್ಲಿಸಲಾಗಿತ್ತು. ಇದೀಗ ಈ ಯೋಜನೆಯನ್ನು ಬಿಡಿಎ ಕೈಗೆತ್ತಿಕೊಂಡಿದ್ದು, ಆದಷ್ಟು ಶೀಘ್ರವೇ ಯೋಜನೆಯ ವರದಿ ಸಲ್ಲಿಸಲು ಸಂಬಂಧ ಪಟ್ಟ ಖಾಸಗಿ ಕಂಪೆನಿಗೆ ಸೂಚಿಸಲಾಗಿದೆ. ಇದರ ಡಿಪಿಆರ್ ಆದ ಮೇಲೆ ಅಂದಾಜು ವೆಚ್ಚ ತಿಳಿಯಲಿದೆ ಎಂದರು.

ಬನಶಂಕರಿ 6ನೇ ಹಂತದಲ್ಲಿ 6 ಎಕರೆಯಲ್ಲಿ ಪಿಪಿಪಿ ಮಾದರಿಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ತೀರ್ಮಾನಿಸಲಾಗಿದೆ. ತುಮಕೂರು ರಸ್ತೆ ದಾಸನಪುರ ಹಳ್ಳಿದಲ್ಲಿ ವಿಲ್ಲಾ ಕಟ್ಟಿದ್ದೇವೆ. ಇದಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ‌ ಮುಂದಿನ ದಿನಗಳಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಇನ್ನಷ್ಟು ವಿಲ್ಲಾ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ.

ಸೆ.25ಕ್ಕೆ ಕೆಂಪೇಗೌಡ ನಿವೇಶನ ಹಂಚಿಕೆ:
ಕೆಂಪೇಗೌಡ ಬಡಾವಣೆಯಲ್ಲಿನ 5 ಸಾವಿರ ನಿವೇಶನಗಳನ್ನು ಸೆ.25ಕ್ಕೆ ಲಾಟರಿ ಮೂಲಕ ಹಂಚಿಕೆ ಮಾಡಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು. 
ಈ ವೇಳೆ 5 ಸಾವಿರ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News