ಸಾಯುವುದು ಹೇಗೆ?: ಆತ್ಮಹತ್ಯೆಗೆ ಯತ್ನಿಸುವ ಮುನ್ನ ಗೂಗಲ್ ನಲ್ಲಿ ಹುಡುಕಾಡಿದ್ದ ಐಪಿಎಸ್ ಅಧಿಕಾರಿ

Update: 2018-09-07 12:20 GMT

ಕಾನ್ಪುರ್, ಸೆ.7: ಬುಧವಾರ ಸೆಲ್ಫೋಸ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಐಪಿಎಸ್ ಅಧಿಕಾರಿ ಸುರೇಂದ್ರ ಕುಮಾರ್ ದಾಸ್ ಅವರು ಕಳೆದ ಹಲವು ದಿನಗಳಿಂದ ಹೇಗೆ ಸಾಯಬಹುದು ಬಗ್ಗೆ ಗೂಗಲ್ ಸರ್ಚ್ ನಡೆಸಿದ್ದರೆಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು  ಹೇಳಿದ್ದಾರೆ.

ಅವರ ಲ್ಯಾಪ್ ಟಾಪ್ ಮತ್ತು ಮೊಬೈಲ್ ನಲ್ಲಿನ ಬ್ರೌಸಿಂಗ್ ಹಿಸ್ಟರಿಯನ್ನು ಸೈಬರ್ ತಜ್ಞರು ಪರಿಶೀಲಿಸಿದಾಗ ಇದು ತಿಳಿದು ಬಂದಿದೆ.

``ಅವರು ಖಿನ್ನರಾಗಿದ್ದರು ಹಾಗೂ ಜೀವನಕ್ಕೆ ಅಂತ್ಯ ಹಾಡಲು ವಿಷ ಅಥವಾ ರೇಝರ್ ಉಪಯೋಗಿಸುವ ವಿಧಾನದ ಬಗ್ಗೆ ಕೆಲ ವೀಡಿಯೋಗಳನ್ನು ನೋಡಿದ್ದರು,'' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರು ಖಿನ್ನರಾಗಿದ್ದರೆಂದು ಕಾನ್ಪುರದ ಹಿರಿಯ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಅನಂತ್ ದಿಯೊ ಹೇಳಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ದಾಸ್ ಅವರು ಕಾನ್ಪುರ್ ಪೂರ್ವ ಜಿಲ್ಲೆಯ ಎಸ್ಪಿಯಾಗಿ ಆಗಸ್ಟ್ 9ರಂದು ಅಧಿಕಾರ ಸ್ವೀಕರಿಸಿದ್ದರು.

ದಾಸ್ ಮತ್ತವರ ಪತ್ನಿ, ನಗರದ ಜಿಎಸ್‍ವಿಎಂ ಮೆಡಿಕಲ್ ಕಾಲೇಜಿನಲ್ಲಿ ಎಂಎಸ್ ಮಾಡುತ್ತಿರುವ ರವೀನಾ ಸಿಂಗ್ ನಡುವೆ ಆಹಾರದ ವಿಚಾರದಲ್ಲಿ ಜಗಳವಾಗಿತ್ತು ಎಂದು ಅವರ ನಿವಾಸದ ಸಿಬ್ಬಂದಿ ಹೇಳಿದ್ದಾರೆ. ಜನ್ಮಾಷ್ಟಮಿಯಂದ ರವೀನಾ ಅವರು ನಾನ್-ವೆಜ್ ಪಿಝಾ ಆರ್ಡರ್ ಮಾಡಿದ್ದೇ ಅವರ ನಡುವೆ ಜಗಳಕ್ಕೆ ಕಾರಣವಾಗಿದ್ದು, ಕೊನೆಗೆ ಅವರ ಅತ್ತೆ ಮಾವ ಬಂದು ಜಗಳ ಬಿಡಿಸಬೇಕಾಗಿ ಬಂದಿತ್ತು ಎಂದು ತಿಳಿದು ಬಂದಿದೆ.

ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ, ಅವರು ಸೇವಿಸಿದ ವಿಷ ಅವರ ಕಿಡ್ನಿಯನ್ನು ಬಾಧಿಸಿದೆ. ವೈದ್ಯರ ತಂಡವೊಂದು ಅವರ ದೇಹಸ್ಥಿತಿಯ ಮೇಲೆ ನಿಗಾ ಇರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News