ಮೋದಿ ಸರಕಾರದಿಂದ ಮಹಿಳಾ ಮೀಸಲಾತಿ ಜಾರಿಯಾಗುವುದಿಲ್ಲ: ದಿನೇಶ್‌ ಗುಂಡೂರಾವ್

Update: 2018-09-07 12:37 GMT

ಬೆಂಗಳೂರು, ಸೆ.7: ಮೋದಿ ಸರಕಾರದಿಂದ ಮಹಿಳಾ ಮೀಸಲಾತಿ ಜಾರಿಯಾಗುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಚನೆಗೊಳ್ಳುವ ಬಿಜೆಪಿಯೇತರ ಸರಕಾರದಿಂದ ಈ ಮಸೂದೆ ಅಂಗೀಕಾರಗೊಳ್ಳಲಿದೆ. ಹೀಗಾಗಿ ಮಹಿಳಾ ಸಮುದಾಯ ಬಿಜೆಪಿಯ ಮಹಿಳಾ ವಿರೋಧಿ ನೀತಿಗಳನ್ನು ಜನತೆಗೆ ತಿಳಿಸುವಂತಹ ಕೆಲಸ ಮಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಶುಕ್ರವಾರ ಬೆಂಗಳೂರು ಮಹಾನಗರ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಎನ್‌ಜಿಒ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಾಧನಾ ಸನ್ಮಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಪಾರ್ಲಿಮೆಂಟ್ ಹಾಗೂ ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಒದಗಿಸುವಂತಹ ಮಸೂದೆಯನ್ನು ಅಂಗೀಕರಿಸಲು ಬಿಜೆಪಿ ಹಿಂದೇಟು ಹಾಕುತ್ತಿದೆ. ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವಂತೆ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಮನವಿ ಮಾಡಿದ್ದರೂ ಕೇಂದ್ರ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲವೆಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ನಾಲ್ಕು ವರ್ಷದಲ್ಲಿ ಜನ ಸಾಮಾನ್ಯರಿಗೆ ಅಗತ್ಯವಾದ ಒಂದೇ ಒಂದು ಜನಪರವಾದ ಕಾನೂನು ಜಾರಿ ಮಾಡಿಲ್ಲ, ಶಿಕ್ಷಣ, ಆರೋಗ್ಯ ಹಾಗೂ ಆಹಾರಕ್ಕೆ ಸಂಬಂಧಿಸಿದಂತೆ ಜನತೆಗೆ ಅನುಕೂಲವಾಗುವಂತಹ ಯಾವೊಂದು ಕಾನೂನು ಜಾರಿ ಮಾಡಿಲ್ಲವೆಂದು ಕಿಡಿಕಾರಿದರು.

ಸೆ.10ರ ಭಾರತ್ ಬಂದ್‌ನಲ್ಲಿ ಪಾಲ್ಗೊಳ್ಳಿ: ಕೇಂದ್ರ ಸರಕಾರ ದಿನನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹೆಚ್ಚಿಸುತ್ತಲೆ ಹೋಗುತ್ತಿದೆ. ಇದರ ಪರಿಣಾಮ ದಿನಬಳಕೆಯ ವಸ್ತುಗಳು ಗಗನಕ್ಕೇರಿವೆ. ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಕಾಂಗ್ರೆಸ್ ಸೆ.10ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ರಾಜ್ಯದಲ್ಲೂ ಭಾರತ್ ಬಂದ್‌ನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತೆಯರು ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ಅವರು ಹೇಳಿದರು.

ಮಾಜಿ ಸಚಿವೆ ಮೊಟಮ್ಮ ಮಾತನಾಡಿ, ಗ್ರಾಮ, ಪಟ್ಟಣ, ನಗರ ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಯಿದೆ. ಅದೇ ಮಾದರಿಯಲ್ಲಿ ಪಾರ್ಲಿಮೆಂಟ್ ಹಾಗೂ ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿಗೆ ದೇಶಾದ್ಯಂತ ಆಂದೋಲನ ಹಮ್ಮಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮಹಿಳಾ ಒಕ್ಕೂಟವು ರೂಪರೇಷೆಗಳನ್ನು ಸಿದ್ಧಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಪರವಾಗಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದನ್ನು ಮಹಿಳಾ ಸಮುದಾಯ ಖಂಡಿಸಬೇಕಿದೆ. ಮಹಿಳಾ ಸಮುದಾಯ ಯಾವುದೆ ಕಾರಣಕ್ಕೂ ಸಮಾಜಘಾತಕ ಶಕ್ತಿಗಳಿಗೆ ಬೆಂಬಲ ಕೊಡಬಾರದು. ಹೀಗಾಗಿ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತೆಯರು ಬಿಜೆಪಿಯ ಕೋಮುವಾದಿ ಚಿಂತನೆಗಳ ಬಗ್ಗೆ ಮಹಿಳಾ ಸಮುದಾಯಕ್ಕೆ ತಿಳುವಳಿಕೆ ನೀಡಬೇಕಿದೆ ಎಂದು ಅವರು ಆಶಿಸಿದರು.

ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ಇವತ್ತು ಮಹಿಳಾ ಸಮುದಾಯ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಬೇಕಾದರೆ, ಅದಕ್ಕೆ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಫುಲೆ ಕಾರಣಕರ್ತರು. ಅವರು ಮಹಿಳಾ ಸಮುದಾಯಕ್ಕೆ ನೀಡಿದ ಶಿಕ್ಷಣ ಕ್ರಾಂತಿಯ ಪರಿಣಾಮವಾಗಿ ನಾವಿಂದು ಶಿಕ್ಷಣವಂತರಾಗಿ, ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಅದೇ ಮಾದರಿಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ತ್ಯಾಗವು ಮಹಿಳಾ ಸಮುದಾಯಕ್ಕೆ ಸ್ಫೂರ್ತಿಯಾಗಿದೆ ಎಂದು ಅಭಿಮಾನಪಟ್ಟರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವೆಯರಾದ ಮೋಟಮ್ಮ, ರಾಣಿ ಸತೀಶ್ ಹಾಗೂ ಶಾಸಕಿ ಸೌಮ್ಯಾರೆಡ್ಡಿಯನ್ನು ಸನ್ಮಾನಿಸಲಾಯಿತು. ಈ ವೇಳೆ ಶಾಸಕ ಎನ್.ಎ.ಹಾರಿಸ್, ಬಾಲಭವನದ ಮಾಜಿ ಅಧ್ಯಕ್ಷೆ ಮಂಜುಳಾ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗದ ಕ್ಷೇತ್ರಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಗಳು ಗೆದ್ದು ತೋರಿಸಿದ್ದಾರೆ. ಹೀಗಾಗಿ ಮಹಿಳಾ ಸಮುದಾಯದ ಶಕ್ತಿಯ ಕುರಿತು ಕಾಂಗ್ರೆಸ್‌ಗೆ ಅರಿವಿದೆ. ಮುಂದಿನ ದಿನಗಳಲ್ಲಿ ನಡೆಯುವ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಕ್ಕೆ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.

-ದಿನೇಶ್‌ ಗುಂಡೂರಾವ್, ಅಧ್ಯಕ್ಷ, ಕೆಪಿಸಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News