ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಪ್ರಶಸ್ತಿ: ಸಚಿವ ತಮ್ಮಣ್ಣ

Update: 2018-09-07 12:43 GMT

ಬೆಂಗಳೂರು, ಸೆ.7: ಬಿಎಂಟಿಸಿ ಮಾದರಿಯಲ್ಲಿಯೇ ರಸ್ತೆ ಸಾರಿಗೆಯ ಎಲ್ಲ ವಿಭಾಗಗಳಿಂದ ಎರಡು ಕೋಟಿ ಮೊತ್ತದ ಅನುದಾನವನ್ನು ಕಸಾಪದಲ್ಲಿ ದತ್ತಿ ಸ್ಥಾಪಿಸುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಜಂಟಿಯಾಗಿ ಆಯೋಜಿಸಿದ್ದ ದಲಿತ ಕವಿ ಡಾ.ಸಿದ್ದಲಿಂಗಯ್ಯಗೆ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ಹಾಗೂ 5 ಜನ ಯುವ ಸಾಹಿತಿಗಳಿಗೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿನ ಎಲ್ಲ ಸಾಹಿತ್ಯಕ್ಕೆ ಜಾನಪದ ಸಾಹಿತ್ಯ ತಾಯಿಬೇರಾಗಿದೆ. ಅದನ್ನು ಯಾವುದೋ ಸರ್ಟಿಫಿಕೇಟ್‌ಗಳನ್ನು ಪಡೆದವರು ಅಥವಾ ಅತ್ಯುತ್ತಮ ಶಿಕ್ಷಣ ಪಡೆದವರು ರಚನೆ ಮಾಡಿಲ್ಲ. ಜಾನಪದ ಸಾಹಿತ್ಯ ದಲಿತ ಕೇರಿಗಳಿಂದ ಹುಟ್ಟಿಕೊಂಡಿದೆ. ದಲಿತರ ನೋವು, ಸಿಟ್ಟು, ಆಕ್ರೋಶಗಳೇ ಸಾಹಿತ್ಯವಾಗಿ ರೂಪಗೊಂಡಿದೆ. ಅನಂತರ ದಿನಗಳಲ್ಲಿ ಸಾಹಿತ್ಯಕ್ಕೆ ಒಂದು ಚೌಕಟ್ಟು ನೀಡಲಾಗಿದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಲವಾರು ಸಾಹಿತಿಗಳಿದ್ದಾರೆ. ಅಂತಹವರನ್ನು ಗುರುತಿಸಿ ಗೌರವಿಸಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಬಿಎಂಟಿಸಿ ಈಗಾಗಲೇ 12 ಜನರಿಗೆ ಅತ್ಯುತ್ತಮ ನೃಪತುಂಗ ಪ್ರಶಸ್ತಿ ನೀಡಿದೆ. ಅದೇ ಮಾದರಿಯಲ್ಲಿ ನಮ್ಮ ಇಲಾಖೆಯ ಎಲ್ಲ ವಿಭಾಗಗಳಿಂದ ಎರಡು ಕೋಟಿ ಅನುದಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನ ದತ್ತಿ ಪ್ರಶಸ್ತಿ ಸ್ಥಾಪಿಸಲಾಗುವುದು ಎಂದು ಹೇಳಿದರು.

'ದಲಿತ ಕುಟುಂಬದಲ್ಲಿ ಜನಿಸಿದ ಸಿದ್ದಲಿಂಗಯ್ಯ ಅವರು ಬದುಕಿನ ಸಂಕಟದ ಧ್ವನಿಯನ್ನು ಕಾವ್ಯದ ಮೂಲಕ ಅನಾವರಣ ಮಾಡಿದರು. ಆಕ್ರೋಶ, ಅಸಹಾಯಕತೆಯನ್ನು ಕವಿತೆಯ ಮೂಲಕ ಹೊರಹಾಕಿ, ಪ್ರತಿಭಟಿಸಿದರು. ಅಷ್ಟೇ ಅಲ್ಲ, ಜಾತೀಯ ಹಾಗೂ ಸಾಂಸ್ಕೃತಿಕ ಅಸಮಾನತೆಯನ್ನು ಎತ್ತಿ ತೋರಿಸಿದರು. ಗಂಭೀರ ಸ್ವಭಾವದಂತೆ ಕಾಣುವ ಸಿದ್ಧಲಿಂಗಯ್ಯ ಅವರಲ್ಲಿ ಸಹ ಚೇಷ್ಟೆ ಗುಣವಿದೆ. ವಿಧಾನಪರಿಷತ್ ಸದಸ್ಯರಾಗಿದ್ದಾಗ ಕೆಲವೊಂದು ಚೇಷ್ಟೆ ಮಾಡಿದ್ದರು ಎನ್ನುವುದನ್ನು ಸ್ವತಃ ಸಿದ್ದಲಿಂಗಯ್ಯ ಅವರು ‘ಊರು ಕೇರಿ-3’ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಎಂದು ವಿಮರ್ಶಕ ಎಸ್.ಆರ್. ವಿಜಯ್ ಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ದಲಿತ ಕವಿ ಡಾ.ಸಿದ್ದಲಿಂಗಯ್ಯ, ದಲಿತರ, ಶೋಷಿತರ ಮುಖದಲ್ಲಿ ನಗುವಿನ ಕಳೆ ಇರುತ್ತದೆ. ಆದರೆ, ಅವರ ಅಂತರಂಗದೊಳಗೆ ಅಪಾರವಾದ ನೋವಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವಂತಾಗಬೇಕು. ಬಡವರ ಸ್ಥಿತಿ ಚಿಂತಾಜನಕವಾಗಿದ್ದು, ಘನತೆಯಿಲ್ಲದ, ಅವಮಾನದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಂತಹವರ ಪರ ದ್ವನಿ ಎತ್ತುವವರ ಸಂಖ್ಯೆ ಹೆಚ್ಚಾಗಬೇಕು ಹಾಗೂ ಸಾಹಿತಿಗಳು ಈ ಕಡೆ ಚಿಂತಿಸಬೇಕು ಎಂದು ನುಡಿದರು.

ಬೆಂಗಳೂರು ನಗರದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕನ್ನಡಿಗರು ಹೆಚ್ಚು ಕನ್ನಡವನ್ನು ಮಾತನಾಡಬೇಕು. ಕೆಲವರು ತಮ್ಮ ಪ್ರತಿಷ್ಠೆಗಾಗಿ ಇಂಗ್ಲಿಷ್ ಬಳಕೆ ಮಾಡುತ್ತಿರುತ್ತಾರೆ. ಅಲ್ಲದೆ, ಕೆಲವರು ಆಂಗ್ಲ ಮತ್ತು ಕನ್ನಡವನ್ನು ಬೆರೆಸಿ ಕಲಬೆರಕೆ ಕನ್ನಡ ಮಾತನಾಡುತ್ತಿರುತ್ತಾರೆ. ನಮಗೆ ಇಂಗ್ಲಿಷ್ ಗೊತ್ತಿದೆ ಎಂಬ ದೊಡ್ಡತನ ತೋರಿಸುವುದನ್ನು ನಿಲ್ಲಿಸಿ ಎಂದು ಸಿದ್ದಲಿಂಗಯ್ಯ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಡಾ.ಎಂ.ಎನ್.ನಂದೀಶ್, ಡಾ.ಬಿ.ಇ.ಶಿವರಾಜ, ಲಕ್ಷ್ಮಣ ನಂದಿಹಾಳ, ಕೃಷ್ಣಪ್ಪ ಎಸ್.ಗುಡಗುಡಿ, ಗಣಪತಿ ಗೋ.ಚಲವಾದಿಗೆ ಸಂಸ್ಥೆಯಿಂದ ಯುವ ಸಾಹಿತಿಗಳಿಗೆ ನೀಡುವ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನುಬಳಿಗಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಎನ್.ಪ್ರಕಾಶ್ ಗೌಡ, ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ, ವಿಮರ್ಶಕ ಎಸ್.ಆರ್.ವಿಜಯಶಂಕರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಾಹಿತ್ಯವು ಸ್ವ ಅನುಭವಕ್ಕಿಂತ, ಸಾರ್ವಜನಿಕರಿಗೆ ಮುಕ್ತವಾಗಿರುವಂತಿರಬೇಕು. ನಮ್ಮೊಳಗಿನ ಭಾವದ ಆಕ್ರೋಶಕ್ಕಿಂತ, ಬದುಕಿನ ಸಂಕಟದ ಧ್ವನಿಯಾಗಬೇಕು. ಅದನ್ನು ಸಾಹಿತ್ಯದೊಳಗೆ ಅಭಿವ್ಯಕ್ತಿಸಬೇಕು. ಸಿಟ್ಟು, ಆಕ್ರೋಶ, ಅಸಹಾಯಕತೆಯನ್ನು ಪ್ರತಿಭಟಿಸುವುದರಲ್ಲಿ ಕವನ ಹುಟ್ಟಿಕೊಳ್ಳುತ್ತದೆ.

-ಎಸ್.ಆರ್.ವಿಜಯಶಂಕರ, ವಿಮರ್ಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News