ದಲಿತರ ಮೇಲೆ ದೌರ್ಜನ್ಯ ನಡೆಸುವ ಹಕ್ಕಿಗಾಗಿ ‘ಭಾರತ ಬಂದ್’!

Update: 2018-09-07 18:47 GMT

ದಲಿತರ ಮೇಲೆ ದೌರ್ಜನ್ಯ ನಡೆಸುವುದು, ಮೇಲ್ಜಾತಿಯ ಜನರ ಸಂವಿಧಾನದತ್ತ ಹಕ್ಕಾಗಿದೆಯೇ? ದಲಿತ ದೌರ್ಜನ್ಯ ತಡೆ ಕಾಯ್ದೆಯ ಮೂಲಕ ಆ ಹಕ್ಕನ್ನು ಮೊಟಕು ಗೊಳಿಸುವ ಪ್ರಯತ್ನ ನಡೆದಿದೆಯೆ? ಗುರುವಾರ ಸಂಘಪರಿವಾರ ಸಂಘಟನೆಗಳು ಉತ್ತರ ಭಾರತದಲ್ಲಿ ಹಮ್ಮಿಕೊಂಡ ‘ಭಾರತ ಬಂದ್’ ಪ್ರತಿಭಟನೆ ಇಂತಹದೊಂದು ಅನುಮಾನ ಮತ್ತು ಭೀತಿಯನ್ನು ಸಮಾಜದಲ್ಲಿ ಹುಟ್ಟಿಸಿ ಹಾಕಿದೆ. ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ಮಸೂದೆಯನ್ನು ಕೇಂದ್ರ ಸರಕಾರ ಇತ್ತೀಚೆಗೆ ಅಂಗೀಕರಿಸಿರುವುದನ್ನು ವಿರೋಧಿಸಿ ಉತ್ತರ ಭಾರತದಲ್ಲಿ ಬಂದನ್ನು ಘೋಷಿಸಲಾಗಿತ್ತು. ಸುಪ್ರೀಂಕೋರ್ಟ್ ಈ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಿದಾಗ, ಅದರ ವಿರುದ್ಧ ದೇಶಾದ್ಯಂತ ದಲಿತರು ಬಂಡೆದ್ದಿದ್ದರು. ಮಾತ್ರವಲ್ಲ, ಸುಪ್ರೀಂಕೋರ್ಟ್‌ನ ನಿರ್ದೇಶನವನ್ನು ವಿರೋಧಿಸಿ ಭಾರತ ಬಂದ್ ಘೋಷಿಸಿದ್ದರು. ಅಲ್ಲಲ್ಲಿ ಹಿಂಸಾಚಾರ ಭುಗಿಲೆದಿತ್ತು. ಪೊಲೀಸರು ಮತ್ತು ಸಂಘಪರಿವಾರದ ಮುಖಂಡರು ಜೊತೆಯಾಗಿ ಈ ಸಂದರ್ಭದಲ್ಲಿ ದಲಿತರ ಮೇಲೆ ಎರಗಿದ್ದರು. ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಲವು ನಾಯಕರು ಒಂದೆಡೆ ಸಂಘಪರಿವಾರದ ದಾಳಿಗೆ, ಮಗದೊಂದೆಡೆ ಪೊಲೀಸರ ಗುಂಡಿಗೆ ಮೃತಪಟ್ಟಿದ್ದರು.

ತಡವಾಗಿ ಎಚ್ಚೆತ್ತ ಕೇಂದ್ರ ಸರಕಾರ, ನ್ಯಾಯಾಲಯದ ತೀರ್ಪಿಗೆ ಪ್ರತಿಯಾಗಿ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಿತು. ಇದೀಗ ಆ ಮಸೂದೆಯ ವಿರುದ್ಧ ಬಲಾಢ್ಯ ಜಾತಿಗಳು ಬೀದಿಗಿಳಿದಿವೆ. ಒಂದೆಡೆ ಮೀಸಲಾತಿಯ ವಿರುದ್ಧ ದೇಶಾದ್ಯಂತ ಸಂಚುಗಳು ನಡೆಯುತ್ತಿವೆ. ಅದರ ಭಾಗವಾಗಿಯೇ, ಬಲಿಷ್ಠ ಹಿಂದುಳಿದ ವರ್ಗ ತಮಗೂ ಮೀಸಲಾತಿ ಬೇಕು ಎಂದು ಒತ್ತಾಯಿಸಲಾರಂಭಿಸಿತು. ರಾಜಕೀಯವಾಗಿ, ಆರ್ಥಿಕವಾಗಿ ಬಲಾಢ್ಯವಾಗಿರುವ ಈ ಜಾತಿಗಳು ಮೀಸಲಾತಿ ಪಡೆಯುವ ಯಾವ ಅರ್ಹತೆಯನ್ನು ಸಂವಿಧಾನವ್ಯಾಪ್ತಿಯಲ್ಲಿ ಹೊಂದಿಲ್ಲ. ಮೇಲ್ಜಾತಿಗಳ ಈ ಮೀಸಲಾತಿ ಹೋರಾಟ, ದಲಿತರ ಮೀಸಲಾತಿಗಳನ್ನು ಇಲ್ಲವಾಗಿಸುವ ಸಂಘಪರಿವಾರದ ಹೋರಾಟದ ಮುಂದುವರಿದ ಭಾಗವಾಗಿದೆ. ಇಷ್ಟಕ್ಕೂ ಈ ದೇಶದ ಎಷ್ಟು ಮಂದಿ ದಲಿತರು ಈ ಮೀಸಲಾತಿಯಿಂದ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮೇಲೆದ್ದು ನಿಂತಿದ್ದಾರೆ ಎಂದರೆ ನಿರಾಸೆಯಾಗುತ್ತದೆ. ಮೀಸಲಾತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕೆ ಮಾರ್ಗಸೂಚಿಗಳನ್ನು ಕಂಡು ಹಿಡಿಯುವ ಬದಲು, ಕೇಂದ್ರ ಸರಕಾರ ಮೀಸಲಾತಿಯನ್ನೇ ಇಲ್ಲವಾಗಿಸುವ ಕಡೆಗೆ ಒಲವು ತೋರಿಸುತ್ತಿದೆ.

‘ಸರಕಾರಿ ಕೆಲಸಗಳೇ ಇಲ್ಲ. ಹೀಗಿರುವಾಗ ಮೀಸಲಾತಿಯಿಂದ ಏನು ಪ್ರಯೋಜನ?’ ಎಂದು ಕೇಂದ್ರ ಸಚಿವರೇ ಮಾಧ್ಯಮಗಳ ಮುಂದೆ ಪ್ರಶ್ನೆಯಿಡುತ್ತಾರೆ. ಸರಕಾರಿ ಸಂಸ್ಥೆಗಳು ಖಾಸಗೀಕರಣಗೊಳ್ಳುತ್ತಿರುವುದರಿಂ ದಾಗಿ, ಮೀಸಲಾತಿ ಖಾಸಗಿ ವಲಯಕ್ಕೂ ವಿಸ್ತಾರಗೊಂಡರೆ ಮಾತ್ರ ಶೋಷಿತ ಸಮುದಾಯದ ಏಳಿಗೆ ಸಾಧ್ಯ ಎನ್ನುವುದನ್ನು ಅವರು ಮರೆತಿದ್ದಾರೆ. ಇದರ ಬೆನ್ನಿಗೇ, ಬಲಾಢ್ಯ ಜಾತಿಗಳೂ ತಮಗೆ ಮೀಸಲಾತಿ ಬೇಕು ಎಂದು ಕೇಳುತ್ತಿವೆ. ಇದೊಂದು ರೀತಿಯಲ್ಲಿ, ತೋಳಗಳು ನಮಗೆ ಇನ್ನೆರಡು ಕೋರೆಹಲ್ಲುಗಳು ಬೇಕು ಎಂದು ಆಗ್ರಹಿಸಿದಂತೆ. ಇವರೆಲ್ಲರ ಅಂತಿಮ ಗುರಿ, ಈಗ ಇರುವ ಮೀಸಲಾತಿಯನ್ನು ದುರ್ಬಲಗೊಳಿಸುವುದು. ಇದೀಗ ಎರಡನೇ ಹಂತವಾಗಿ, ದಲಿತರಿಗೆ ರಕ್ಷಣೆ ನೀಡುತ್ತಿದ್ದ ದಲಿತ ದೌರ್ಜನ್ಯ ತಡೆ ಕಾಯ್ದೆಯ ಮೇಲೆ ಕೆಂಗಣ್ಣು ಬಿದ್ದಿದೆ. ದೌರ್ಜನ್ಯ ಕಾಯ್ದೆಯನ್ನು ದುರುಪಯೋಗಗೊಳಿಸಲಾಗುತ್ತಿದೆ ಎಂಬ ನೆಪ ಒಡ್ಡಿ ಸುಪ್ರೀಂಕೋರ್ಟ್ ಕಾಯ್ದೆಯನ್ನು ದುರ್ಬಲಗೊಳಿಸಲು ಮುಂದಾಯಿತು. ಆದರೆ ದೇಶಾದ್ಯಂತ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯದ ಕುರಿತಂತೆ ಜಾಣ ಕುರುಡನ್ನು ಪ್ರದರ್ಶಿಸಿತು.

ಜಾತಿಯ ಕಾರಣಕ್ಕೆ ದಲಿತರ ಮೇಲೆ ನಡೆಯುತ್ತಿರುವ ಹಿಂಸೆ, ಕೊಲೆ, ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿರುವುದು ಪದೇ ಪದೇ ವರದಿಯಾಗುತ್ತಿದ್ದರೂ, ನ್ಯಾಯಾಲಯದ ಪಾಲಿಗೆ ‘ಈ ಕಾನೂನನ್ನು ದುರುಪಯೋಗ ಪಡಿಸಿ ಮೇಲ್ಜಾತಿಯ ಅಮಾಯಕ ಜನರನ್ನು ಸಿಲುಕಿಸುತ್ತಿದ್ದಾರೆ’ ಎನ್ನುವುದೇ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಯಾಗಿ ಕಂಡಿತು. ಸಹಜವಾಗಿಯೇ ದಲಿತರು ತೀರ್ಪಿನ ಇದರ ವಿರುದ್ಧ ತಿರುಗಿ ಬಿದ್ದರು. ಸರಕಾರದ ವಿರುದ್ಧ ದಲಿತರು ಆಕ್ರೋಶಗೊಂಡಿರುವುದನ್ನು ಕಂಡ ಸರಕಾರ, ಮಸೂದೆ ತಿದ್ದುಪಡಿಯ ನಾಟಕವಾಡಿತು. ವಿಪರ್ಯಾಸವೆಂದರೆ, ಇದೀಗ ಸಂಘಪರಿವಾರದ ಸಂಘಟನೆಗಳಿಂದಲೇ, ಈ ಮಸೂದೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ದಲಿತರ ಮೇಲೆ ನಡೆಯುವ ದೌರ್ಜನ್ಯ ತಡೆಯುವ ಕಾಯ್ದೆಯನ್ನು ಸಬಲಗೊಳಿಸಬಾರದು ಎಂದು ಗುರುವಾರ ಬೀದಿಗಿಳಿದ ಸಂಘಟನೆಗಳು ಹಲವೆಡೆ ಹಿಂಸಾಚಾರಗಳನ್ನೂ ಎಸಗಿದವು. ಈ ಪ್ರತಿಭಟನೆಯ ಮೂಲಕ ದಲಿತರ ಮೇಲೆ ದೌರ್ಜನ್ಯ ನಡೆಸುವ ಹಕ್ಕನ್ನು ಅವರು ಮರಳಿ ಬೇಡುತ್ತಿದ್ದಾರೆ. ಅಂದರೆ, ದಲಿತರು ಸಾಮಾಜಿಕವಾಗಿ, ರಾಜಕೀಯವಾಗಿ ತಮ್ಮ ಮಟ್ಟಕ್ಕೆ ಏರುವುದು ಇವರಿಗೆ ಸಹಿಸಲಸಾಧ್ಯವಾಗಿದೆ. ಅವರನ್ನು ದೈಹಿಕ ಬಲದಿಂದ ದಮನಿಸಲು ಕಾನೂನು ಅಡ್ಡಿಯಾಗಿದೆ. ಆದುದರಿಂದಲೇ, ದೌರ್ಜನ್ಯ ತಡೆ ಕಾಯ್ದೆ ತಿದ್ದು ಪಡಿ ಮಸೂದೆಯ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹದೊಂದು ಸಂವಿಧಾನ ವಿರೋಧಿ ಬಂದ್‌ನ್ನು ಸಂಘಟಿಸಿದ ಸಂಘಟನೆಗಳ ವಿರುದ್ಧ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕಾಗಿತ್ತು. ಅವರ ಮೇಲೆ ಮೊಕದ್ದಮೆ ದಾಖಲಿಸ ಬೇಕಾಗಿತ್ತು. ಆದರೆ ಕೇಂದ್ರ ಸರಕಾರ ‘ಅದೊಂದು ಪ್ರಜಾಸತ್ತಾತ್ಮಕ ಬಂದ್’ ಎಂದು ಬಿಂಬಿಸಲು ಹೊರಟಿದೆ. ಯಾವುದೋ ಬೆರಳೆಣಿಕೆಯ ಸಂಘಟನೆಗಳು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಗುಂಪಾಗಿ ಬೀದಿಗಿಳಿದು ದಾಂಧಲೆ ನಡೆಸಿರುವುದನ್ನೇ ‘ಭಾರತ ಬಂದ್’ ಎಂದು ಕರೆದು, ಅದಕ್ಕೆ ಪ್ರತಿಕ್ರಿಯಿಸುವ ಮಟ್ಟಕ್ಕಿಳಿದಿದೆ . ಸಂಸತ್‌ನಲ್ಲಿ ಅಂಗೀಕಾರವಾದ ಮಸೂದೆಯ ವಿರುದ್ಧ ಬೀದಿಗಿಳಿದಿರುವ ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕಾಗಿದ್ದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸಂವೇದನಾ ರಹಿತವಾಗಿ ಪ್ರತಿಕ್ರಿಯಿಸಿ, ಬಂದ್‌ನ್ನು ಪರೋಕ್ಷವಾಗಿ ಸಮರ್ಥಿಸಿದ್ದಾರೆ. ‘‘ನಾನು ನನ್ನ ಮಗನಿಗೆ ದೊಡ್ಡ ಚಾಕಲೇಟ್ ನೀಡುತ್ತೇನೆ ಎಂದು ಭಾವಿಸಿ. ಆದರೆ ಆನಂತರ ಅಷ್ಟೊಂದು ಜಾಕಲೇಟನ್ನು ಒಮ್ಮೆಲೆ ತಿನ್ನುವುದು ಸರಿಯಲ್ಲ ಎಂದು ನನಗೆ ಅನಿಸುತ್ತದೆ. ಆಗ ನಾನು ಹೆಚ್ಚಿನ ಚಾಕಲೇಟನ್ನು ಆತನಿಂದ ವಾಪಸ್ ಪಡೆಯಲು ಯತ್ನಿಸುತ್ತೇನೆ. ಆದರೆ ಅದು ಅಷ್ಟು ಸುಲಭವಲ್ಲ’’ ಎಂದು ಸಭೆಯೊಂದರಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, ‘‘ಹಿಂದೆ ಸಮಾಜದ ಒಂದು ವರ್ಗಕ್ಕೆ ಅನ್ಯಾಯ ಮಾಡಲಾಗಿದೆ ಎಂದ ಮಾತ್ರಕ್ಕೆ ಅದರ ಲೆಕ್ಕವನ್ನು ಚುಕ್ತಾ ಮಾಡಲು ಇತರ ವರ್ಗಗಳಿಗೆ ಅನ್ಯಾಯ ಮಾಡಬೇಕು ಎಂದರ್ಥವಲ್ಲ...’’ ಎಂದೂ ಅವರು ತಿಳಿಸಿದ್ದಾರೆ. ಮಹಾಜನ್ ಮತ್ತು ಅವರ ಪಕ್ಷವಾಗಿರುವ ಬಿಜೆಪಿ ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ಹೇಗೆ ಅರ್ಥೈಸಿಕೊಂಡಿದೆ ಎನ್ನುವುದಕ್ಕೆ ಅವರ ಮಾತುಗಳು ಉದಾಹರಣೆಯಾಗಿದೆ.

ದಲಿತ ದೌರ್ಜನ್ಯ ತಡೆ ಕಾಯ್ದೆ, ದಲಿತರಿಗೆ ನೀಡಿರುವ ಚಾಕಲೇಟ್ ಅಲ್ಲ. ಸಂವಿಧಾನ ಅವರಿಗೆ ನೀಡಿರುವ ಎಲ್ಲರಂತೆ ಬದುಕುವ ಹಕ್ಕಿನ ಭಾಗ ಅದು. ಹಾಗೆಯೇ ದಲಿತ ದೌರ್ಜನ್ಯ ಕಾಯ್ದೆ, ಹಿಂದೆ ದಲಿತರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿರುವುದಕ್ಕಾಗಿ ಈಗ ಪ್ರತಿ ಹಲ್ಲೆ ನಡೆಸಲು ದಲಿತರಿಗೆ ನೀಡಿರುವ ಹಕ್ಕೂ ಅಲ್ಲ. ದಲಿತರ ಮೇಲೆ ದೌರ್ಜನ್ಯ ನಡೆಯದಂತೆ ಅವರು ಕಾಯುವುದಕ್ಕೆ ಇರುವ ಕವಚ ಅದು. ಮಹಾಜನ್ ಅವರ ಹೇಳಿಕೆಯಿಂದ ಒಂದಂತೂ ಸ್ಪಷ್ಟವಾಗುತ್ತದೆ. ಬಿಜೆಪಿ ಚಾಕಲೇಟನ್ನು ಕೊಟ್ಟಂತೆ ಮಾಡಿದೆ. ಶೀಘ್ರದಲ್ಲೇ ಆ ಚಾಕಲೇಟನ್ನು ಮನವೊಲಿಸಿ ಹಿಂದಕ್ಕೆ ತೆಗೆದುಕೊಳ್ಳಲಿದೆ. ಅಂದರೆ, ದಲಿತರ ಮೇಲೆ ದೌರ್ಜನ್ಯ ನಡೆಸಲು ಮೇಲ್ಜಾತಿಗೆ ಮತ್ತೆ ಹಕ್ಕನ್ನು ಮರಳಿಸಲಿದೆ. ಅದಕ್ಕೆ ಮುನ್ನ ದಲಿತ ಸಂಘಟನೆಗಳು ಎಚ್ಚೆತ್ತು ಒಂದಾಗಬೇಕಾಗಿದೆ. ದಲಿತರನ್ನು ಮತ್ತೆ ಮನುವಾದಿ ವ್ಯವಸ್ಥೆಗೆ ದಬ್ಬುವ ಸರಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಯತ್ನವನ್ನು ಎಲ್ಲ ಶೋಷಿತ ಸಮುದಾಯ ಒಂದಾಗಿ ಪ್ರತಿರೋಧಿಸುವ ಸಮಯ ಹತ್ತಿರ ಬಂದಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ, ದಲಿತರು ನೀರು ಮುಟ್ಟುವುದನ್ನು, ಶಾಲೆ ಕಲಿಯುವುದನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News