​ಸೈಬರ್ ಅಪರಾಧ: ರಾಜ್ಯದಲ್ಲಿ ಮೊಟ್ಟಮೊದಲ ಶಿಕ್ಷೆ ಪ್ರಕಟ

Update: 2018-09-08 03:43 GMT

ಬೆಂಗಳೂರು, ಸೆ.8: ಸೈಬರ್ ಅಪರಾಧಕ್ಕಾಗಿ ಟೆಕ್ಕಿಯೊಬ್ಬನಿಗೆ ಬೆಂಗಳೂರು ನ್ಯಾಯಾಲಯ ಎರಡೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದು ಸೈಬರ್ ಅಪರಾಧ ಪ್ರಕರಣದಲ್ಲಿ ರಾಜ್ಯದಲ್ಲಿ ನ್ಯಾಯಾಲಯ ವಿಧಿಸಿದ ಮೊಟ್ಟಮೊದಲ ಶಿಕ್ಷೆಯಾಗಿದೆ.

ಸ್ನೇಹಿತೆಯೊಬ್ಬಳ ಚಿತ್ರವನ್ನು ನಗ್ನಚಿತ್ರವಾಗಿ ಮಾರ್ಪಡಿಸಿ ಅಶ್ಲೀಲ ಬರಹದೊಂದಿಗೆ ಆಕೆಗೆ ಹಾಗೂ ಇತರರಿಗೆ ಕಳುಹಿಸಿದ ಆರೋಪದಲ್ಲಿ ಟೆಕ್ಕಿ ಶಿಕ್ಷೆಗೊಳಗಾಗಿದ್ದಾನೆ.

ಬಾಗಲಕೋಟೆ ಮೂಲದ ಶಿವಪ್ರಸಾದ್ ಸಜ್ಜನ್(38) ಎಂಬಾತನಿಗೆ 25 ಸಾವಿರ ರೂಪಾಯಿ ದಂಡವನ್ನೂ ವಿಧಿಸಿ ಮೊದಲನೇ ಹೆಚ್ಚುವರಿ ನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತೀರ್ಪು ನೀಡಿದೆ. ಕೇಂದ್ರೀಯ ತನಿಖಾ ವಿಭಾಗದಲ್ಲಿ ಸೈಬರ್ ಅಪರಾಧ ಠಾಣೆ ಆರಂಭಿಸಿದ 17 ವರ್ಷಗಳ ಬಳಿಕ ಈ ಶಿಕ್ಷೆ ಪ್ರಕಟವಾಗಿದೆ. ಸಿಐಡಿ ತನಿಖಾಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು.

ತನ್ನ ನಗ್ನಚಿತ್ರವನ್ನು ಕೃತಕವಾಗಿ ಸೃಷ್ಟಿಸಿದ್ದಾಗಿ ಈತನ ಮೇಲೆ ಮಹಿಳೆಯೊಬ್ಬರು 2008ರಲ್ಲಿ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದ ಸಜ್ಜನ್‌ನನ್ನು ಬಂಧಿಸಲಾಗಿತ್ತು.

ಈ ಪ್ರಕರಣವನ್ನು ಸಿಐಡಿಯ ಸೈಬರ್ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅನ್ವಯ ಎಲೆಕ್ಟ್ರಾನಿಕ್ ವಿಧಾನದಲ್ಲಿ ಅಶ್ಲೀಲ ಅಂಶಗಳನ್ನು ಪ್ರಕಟಿಸಿದ ಅಥವಾ ವರ್ಗಾಯಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News