ಪೊಲೀಸರು ಹೆಸರಿಸಿರುವ 7 ಸಂಘಟನೆಗಳ ಪೈಕಿ 1 ಮಾತ್ರ ನಿಷೇಧಿತ ಸಂಘಟನೆ

Update: 2018-09-08 07:52 GMT

ಹೊಸದಿಲ್ಲಿ, ಸೆ.8: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಹೆಸರಿಸಿರುವ ಏಳು  ಸಂಘಟನೆಗಳ ಪೈಕಿ  ಕೇವಲ ಒಂದು ಸಂಘಟನೆ- ರೆವೊಲ್ಯೂಶನರಿ ಡೆಮಾಕ್ರೆಟಿಕ್  ಫ್ರಂಟ್ (ಆರ್‍ಡಿಎಫ್) ಅನ್ನು  ಮಾತ್ರ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳು `ಕಾನೂನು ಬಾಹಿರ' ಎಂದು ಘೋಷಿಸಿದ್ದವು. ಉಳಿದಂತೆ ಇತರ ಆರು ಸಂಘಟನೆಗಳಾದ ‘ಕಮಿಟಿ ಫಾರ್ ದಿ ರಿಲೀಸ್ ಆಫ್ ಪೊಲಿಟಿಕಲ್ ಪ್ರಿಸನರ್ಸ್’, ‘ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್  ಡೆಮಾಕ್ರೆಟಿಕ್ ರೈಟ್ಸ್’, ‘ಇಂಡಿಯನ್ ಅಸೋಸಿಯೇಶನ್ ಆಫ್ ಪೀಪಲ್ಸ್ ಲಾಯರ್ಸ್’, ‘ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರೆಟಿಕ್ ರೈಟ್ಸ್’, ‘ರಿಪಬ್ಲಿಕನ್ ಪ್ಯಾಂಥರ್ಸ್’ ಹಾಗೂ ‘ವಿಸ್ಥಾಪನ್ ವಿರೋಧಿ ಜನ್ ವಿಕಾಸ್ ಆಂದೋಲನ್’ ಇವುಗಳನ್ನು ಯಾವತ್ತೂ ನಿಷೇಧಿಸಲಾಗಿಲ್ಲ.

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯ ತನಕ ಬಂಧಿಸಲ್ಪಟ್ಟಿರುವ ಹತ್ತು ಮಂದಿ ಕಾರ್ಯಕರ್ತರ ಪೈಕಿ ಎಂಟು ಮಂದಿ ಈ  ಏಳು ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅವರೆಂದರೆ ಪಿ. ವರವರ ರಾವ್ (ಆರ್‍ಡಿಎಫ್), ಸುಧಾ ಭಾರಧ್ವಾಜ್ ಮತ್ತು ಸುರೇಂದ್ರ ಗದ್ಲಿಂಗ್ (ಇಂಡಿಯನ್ ಅಸೋಸಿಯೇಶನ್ ಫಾರ್ ಪೀಪಲ್ಸ್ ಲಾಯರ್ಸ್), ಗೌತಮ್ ನವ್ಲಖ (ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರೆಟಿಕ್ ರೈಟ್ಸ್), ರೋನಾ ವಿಲ್ಸನ್ ( ಕಮಿಟಿ ಫಾರ್ ರಿಲೀಸ್ ಆಫ್ ಪೊಲಿಟಿಕಲ್ ಪ್ರಿಸನರ್ಸ್), ಸುಧೀರ್ ಧವಳೆ (ರಿಪಬ್ಲಿಕನ್ ಪ್ಯಾಂಥರ್ಸ್), ಶೋಮಾ ಸೇನ್ (ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರೆಟಿಕ್ ರೈಟ್ಸ್) ಹಾಗೂ ಮಹೇಶ್ ರಾವತ್ (ವಿಸ್ಥಾಪನ್ ವಿರೋಧಿ ಜನ್ ವಿರೋಧಿ  ಜನ್ ವಿಕಾಸ್ ಆಂದೋಲನ್).

ಉಳಿದ ಇಬ್ಬರು- ವೆರ್ನೊನ್ ಗೊನ್ಸಾಲ್ವಿಸ್ ಹಾಗೂ ಅರುಣ್ ಫೆರೇರಾ ಅವರು  2009ರಲ್ಲಿ ನಿಷೇಧಿಸಲ್ಪಟ್ಟ  ಸಿಪಿಐ(ಮಾವೋವಾದಿ) ಜತೆ ಈ ಹಿಂದೆ ನಂಟು ಹೊಂದಿದ್ದರೆನ್ನಲಾಗಿದೆ.

ಆರ್‍ಡಿಎಫ್ ಸಂಘಟನೆಯನ್ನು ಒಡಿಶಾ ಸರಕಾರ 2005ರಲ್ಲಿ, ಆಂಧ್ರ ಪ್ರದೇಶ 2012ರಲ್ಲಿ ಹಾಗೂ ತೆಲಂಗಾಣ ಕಳೆದ ತಿಂಗಳು ನಿಷೇಧಿಸಿದ್ದವು. ಈ ಸಂಘಟನೆ ಸಿಪಿಐ(ಮಾವೋವಾದಿ) ಜತೆ ನಂಟು ಹೊಂದಿದೆ ಎನ್ನಲಾಗಿದ್ದು  ಈ ಸಂಘಟನೆಯೊಂದಿಗೆ ನಂಟು ಹೊಂದಿದ ಜನರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯ ಡಿಸೆಂಬರ್ 2012ರಲ್ಲಿ ರಾಜ್ಯಗಳಿಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News