ಈ ಆಸ್ಪತ್ರೆಯಲ್ಲಿ ಪ್ರತಿದಿನ 1 ಗಂಟೆ ಹೆಲ್ಮೆಟ್ ಧರಿಸಲಿದ್ದಾರೆ ವೈದ್ಯರು !

Update: 2018-09-08 12:24 GMT

ಹೈದರಾಬಾದ್, ಸೆ.8: ಇಲ್ಲಿನ ಉಸ್ಮಾನಿಯಾ ಜನರಲ್ ಆಸ್ಪತ್ರೆಯ ವೈದ್ಯರು ಹೆಲ್ಮೆಟ್ ಧರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆಗೈದು ಎಲ್ಲರ ಗಮನಸೆಳೆದಿದ್ದಾರೆ. ತೆಲಂಗಾಣ ರಾಜ್ಯದ ಅತಿ ದೊಡ್ಡ ಸರಕಾರಿ ಆಸ್ಪತ್ರೆಯ ಕಟ್ಟಡದ ದುರವಸ್ಥೆಯತ್ತ ಸರಕಾರದ ಗಮನ ಹರಿಸುವ ಪ್ರಯತ್ನವಾಗಿ ಈ ಪ್ರತಿಭಟನೆ ನಡೆದಿದೆ.

ಆಸ್ಪತ್ರೆ ಕಟ್ಟಡದ ಛಾವಣಿಯ ಸಿಮೆಂಟ್ ಚೂರುಗಳು ಆಗಾಗ ಬಿದ್ದು ಅದು ವೈದ್ಯರು ಮಾತ್ರವಲ್ಲದೆ ರೋಗಿಗಳು ಹಾಗೂ ಆಸ್ಪತ್ರೆಯ ಇತರ ಸಿಬ್ಬಂದಿಯ ಜೀವಕ್ಕೆ ಅಪಾಯವೊಡ್ಡುವ ಸಾಧ್ಯತೆಯಿದ್ದು, ಈಗಾಗಲೇ ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಒಂದು ಗಂಟೆ ಕಾಲ ಈ ರೀತಿ ಹೆಲ್ಮೆಟ್ ಧರಿಸಿ ಪ್ರತಿಭಟಿಸುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯ ಕಟ್ಟಡ 100 ವರ್ಷ ಹಳೆಯದಾಗಿದ್ದು, ಅಲ್ಲಿನ ಸಿಬ್ಬಂದಿ ಹಾಗೂ ರೋಗಿಗಳಿಗೆ ಭೀತಿ ಹುಟ್ಟಿಸುತ್ತಿದೆ. ಕೆಲ ಸಿಬ್ಬಂದಿ `ಅಸುರಕ್ಷಿತ ವಲಯ' ಎಂದು ಬರೆಯಲಾದ ಪೋಸ್ಟರುಗಳನ್ನು ಕೈಗಳಲ್ಲಿ ಹಿಡಿದುಕೊಂಡು ಹೆಲ್ಮೆಟ್ ಧರಿಸಿ ಕೆಲಸ ಮಾಡುತ್ತಿರುವುದೂ ಕಂಡು ಬಂದಿದೆ. ಆದರೆ ರೋಗಿಗಳ್ಯಾರೂ ಹೆಲ್ಮೆಟ್ ಧರಿಸಿದ್ದು ಕಂಡು ಬಂದಿಲ್ಲ.

ಈ ಹಿಂದೆ ಆಸ್ಪತ್ರೆಯ ವೈದ್ಯರು ಕಟ್ಟಡದ ದುರಸ್ತಿಗೆ ಆಗ್ರಹಿಸಿ ನಾಲ್ಕು ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ದರು. ಇದರ ನಂತರ ಎಪ್ರಿಲ್ ತಿಂಗಳಿನಲ್ಲಿ ರಾಜ್ಯದ ಆರೋಗ್ಯ ಸಚಿವ ಲಕ್ಷ್ಮ ರೆಡ್ಡಿ ವೈದ್ಯರ ಬೇಡಿಕೆ ಪೂರೈಸುವುದಾಗಿ ತಿಳಿಸಿದ್ದರು.

ಹೈದರಾಬಾದ್ ನಗರಪಾಲಿಕೆ ಈಗಾಗಲೇ ಈ ಕಟ್ಟಡವನ್ನು ಅಸುರಕ್ಷಿತ ಎಂದು ಘೋಷಿಸಿದೆ. ತೆಲಂಗಾಣ ರಾಜ್ಯ ವೈದ್ಯಕೀಯ ಮೂಲಭೂತಸೌಕರ್ಯ ನಿಗಮದ ಪ್ರಕಾರ ಈ ಕಟ್ಟಡದ ಕನಿಷ್ಠ ಎರಡು ಮಹಡಿಗಳು ಅಸುರಕ್ಷಿತವಾಗಿವೆ.

2015ರಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಆವರು ಈ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವ ಪ್ರಸ್ತಾಪ ಮುಂದಿಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News