ನರೇಂದ್ರ ಮೋದಿ ಆಡಳಿತದಿಂದ ದೇಶಕ್ಕೆ ಭವಿಷ್ಯವಿಲ್ಲ: ದಿನೇಶ್‌ ಗುಂಡೂರಾವ್

Update: 2018-09-08 12:29 GMT

ಬೆಂಗಳೂರು, ಸೆ.8: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ಕೈಗೆ ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಸಿಕ್ಕಿದರೆ ದೇಶಕ್ಕೆ ಭವಿಷ್ಯವಿಲ್ಲದಂತಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾವಲ್‌ಭೈರಸಂದ್ರದಲ್ಲಿ ಬೆಂಗಳೂರು ನಗರ ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ‘ಶಕ್ತಿ’ ಕಾಂಗ್ರೆಸ್ ಕಾರ್ಯಕರ್ತರ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ದ್ವೇಷದ ವಾತಾವರಣ ಹೆಚ್ಚಾಗುತ್ತಿದೆ. ಆದುದರಿಂದ, ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚು ಸಕ್ರಿಯವಾಗಿ ದೇಶವನ್ನು ಕಟ್ಟುವ ಹಾಗೂ ರಕ್ಷಣೆ ಮಾಡುವ ಕೆಲಸವನ್ನು ಮಾಡಬೇಕಿದೆ ಎಂದು ಅವರು ಕರೆ ನೀಡಿದರು.

ದಿಲ್ಲಿಯಿಂದ ಬೂತ್‌ಮಟ್ಟದ ಕಾರ್ಯಕರ್ತರನ್ನು ಸಂಪರ್ಕಿಸುವ ಉದ್ದೇಶದಿಂದ ಶಕ್ತಿ ಅಭಿಯಾನವನ್ನು ಆರಂಭಿಸಲಾಗಿದೆ. ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಶಕ್ತಿ ಅಭಿಯಾನದೊಂದಿಗೆ ಜನರನ್ನು ಸೇರಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುಲಿಕೇಶಿನಗರ ಕ್ಷೇತ್ರದಿಂದ ಅಖಂಡ ಶ್ರೀನಿವಾಸಮೂರ್ತಿಯನ್ನು 80 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಇಲ್ಲಿನ ಮತದಾರರು, ನಮ್ಮ ಪಕ್ಷ, ಕಾರ್ಯಕರ್ತರು, ಮುಖಂಡರು ಹಾಗೂ ಅಭ್ಯರ್ಥಿ ಮೇಲೆ ಇಟ್ಟಿರುವ ನಂಬಿಕೆಯನ್ನು ಇಡೀ ರಾಜ್ಯಕ್ಕೆ ತೋರಿಸಿದ್ದಾರೆ ಎಂದು ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಮಂದಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ಬಾರಿ ಉತ್ತರ ಲೋಕಸಭಾ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಬೇಕಿದೆ. ಇದಕ್ಕಾಗಿ, ಎಲ್ಲ ಕಾರ್ಯಕರ್ತರು, ಮುಖಂಡರು, ಬ್ಲಾಕ್‌ಮಟ್ಟದ ಪದಾಧಿಕಾರಿಗಳು ಶ್ರಮಿಸಬೇಕಿದೆ ಎಂದು ಅವರು ಹೇಳಿದರು.

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ಸೆ.10ರಂದು ಭಾರತ ಬಂದ್‌ಗೆ ಕರೆ ನೀಡಲಾಗಿದೆ. ನರೇಂದ್ರಮೋದಿಯ ಆಡಳಿತದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಮಹಿಳೆಯರು, ರೈತರು, ಕಾರ್ಮಿಕರು ಸೇರಿದಂತೆ ಯಾರಿಗೂ ಸಹಾಯವಾಗಿಲ್ಲ. ಅಚ್ಛೇದಿನ್ ಬಂದಿಲ್ಲ ಎಂದು ದಿನೇಶ್‌ ಗುಂಡೂರಾವ್ ಟೀಕಿಸಿದರು.

ಜನಸಾಮಾನ್ಯರ ಕಷ್ಟವನ್ನು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡಲು ಭಾರತ ಬಂದ್ ಮಾಡಲಾಗುತ್ತಿದೆ. ಜನರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೌನವಾಗಿರುತ್ತಾರೆ. ಕೇವಲ ತಮ್ಮ ಮನ್‌ಕೀ ಬಾತ್ ಹೇಳುತ್ತಾರೆಯೆ ಹೊರತು, ಬೇರೆಯವರ ಸಂಕಷ್ಟವನ್ನು ಆಲಿಸುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಝಮೀರ್‌ ಅಹ್ಮದ್‌ ಖಾನ್, ಪರಮೇಶ್ವರ್ ಸೇರಿದಂತೆ ಪಕ್ಷದ ಎಲ್ಲ ಮುಖಂಡರು ಹಾಗೂ ನನ್ನ ಕ್ಷೇತ್ರದ ಕಾರ್ಯಕರ್ತರು, ಮತದಾರರ ಆಶೀರ್ವಾದದಿಂದಾಗಿ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿಯನ್ನು ನೀಡಿ, ನನ್ನ ಮತಕ್ಷೇತ್ರದಲ್ಲಿ ಕನಿಷ್ಠ 1 ಲಕ್ಷ ಮತಗಳ ಮುನ್ನಡೆ ಕೊಡಿಸುತ್ತೇನೆ. ಶಕ್ತಿ ಅಭಿಯಾನಕ್ಕೆ ನಮ್ಮ ಕ್ಷೇತ್ರದಲ್ಲಿ ಚಾಲನೆ ನೀಡಿರುವುದು ಸಂತಸ ತಂದಿದೆ. ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ನಮ್ಮ ಕಾರ್ಯಕರ್ತರ ಪಡೆ ಸಜ್ಜಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತ ನಡೆಸುತ್ತಿದೆ. ಆದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. ಯುವಕರಿಗೆ ಶಕ್ತಿಯನ್ನು ತುಂಬುತ್ತಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಲಿ ಎಂದು ಅವರು ಹಾರೈಸಿದರು.

ಕಾರ್ಯಕ್ರಮದಲ್ಲಿ ಮೇಯರ್ ಕೆ.ಸಂಪತ್‌ರಾಜ್, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಬಿಬಿಎಂಪಿ ಸದಸ್ಯರಾದ ಎ.ಆರ್.ಝಾಕಿರ್, ಸೈಯ್ಯದ್ ಝಮೀರ್ ಶಾ, ಏಳುಮಲೈ, ಸಯೀದಾ ಸಾಜಿದಾ, ಬೆಂಗಳೂರು ನಗರ ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್‌ಕುಮಾರ್, ಬಿಎಂಟಿಸಿ ಮಾಜಿ ಅಧ್ಯಕ್ಷ ನಾಗರಾಜ್ ಯಾದವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News