ಸಮ್ಮಿಶ್ರ ಸರಕಾರ ಉರುಳಿಸಿ ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನ: ಸಂಸದ ಡಿ.ಕೆ.ಸುರೇಶ್

Update: 2018-09-08 12:35 GMT

ಬೆಂಗಳೂರು, ಸೆ.8: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ವಾಮಮಾರ್ಗ ಅನುಸರಿಸುತ್ತಿರುವುದಲ್ಲದೆ, ಶಾಸಕರ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಸದಾಶಿವನಗರದಲ್ಲಿರುವ ಸಚಿವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಸೆಡ್ಡು ಹೊಡೆದು ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆ ಮಾಡಿದ್ದೇವೆ. ಆದುದರಿಂದ, ನಮ್ಮ ವಿರುದ್ಧ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡು ಕಿರುಕುಳ ನೀಡಲಾಗುತ್ತಿದೆ ಎಂದರು.

ರಾಜ್ಯ ಸರಕಾರಕ್ಕೆ ಬೆಂಬಲವಾಗಿ ಇರುವವರನ್ನು ಬಗ್ಗು ಬಡಿಯಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ವಿರುದ್ಧ ನಾಲ್ಕು ಪ್ರಾಸಿಕ್ಯೂಷನ್ ಪ್ರಕರಣಗಳನ್ನು ಹಾಕಿದ್ದಾರೆ. ಆ ಪ್ರಕರಣಗಳಿಂದ ಏನು ಆಗುವುದಿಲ್ಲ ಎಂದು ಗೊತ್ತಾದ ಮೇಲೆ, ಈಗ ಹಿಂಬಾಗಿಲ ಮೂಲಕ ಶಿವಕುಮಾರ್ ಮೇಲೆ ಒತ್ತಡ ಹೇರಿ, ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸಿ, ಲೋಕಸಭಾ ಚುನಾವಣೆಯಲ್ಲಿ ‘ಮಿಷನ್ 25’ ಗುರಿ ಸಾಧಿಸಲು ಬಿಜೆಪಿ ಮುಂದಾಗಿದೆ ಎಂದು ಅವರು ದೂರಿದರು.

ಇಡಿ, ಸಿಬಿಐ ಹಾಗೂ ಐಟಿ ಅಧಿಕಾರಿಗಳು ಬಿಜೆಪಿ ಪಕ್ಷದ ಮೋರ್ಚಾಗಳ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಸಮ್ಮಿಶ್ರ ಸರಕಾರ ಸುಭದ್ರವಾಗಿ ಆಡಳಿತ ನಡೆಸುತ್ತಿರುವುದು ಬಿಜೆಪಿಯ ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಸಹಿಸಲು ಆಗುತ್ತಿಲ್ಲ ಎಂದು ಅವರು ಟೀಕಿಸಿದರು.

ನಮ್ಮ ರಾಜ್ಯದಲ್ಲಿ ಕೇವಲ ಡಿ.ಕೆ.ಶಿವಕುಮಾರ್‌ರನ್ನು ಮಾತ್ರ ಗುರಿ ಮಾಡುತ್ತಿಲ್ಲ. ಇನ್ನು ಇಬ್ಬರು-ಮೂವರು ನಾಯಕರನ್ನು ಬಿಜೆಪಿ ಟಾರ್ಗೆಟ್ ಮಾಡಿದೆ. ತನ್ನ ಗುರಿ ಸಾಧನೆಗೆ ಅನುಸರಿಸುತ್ತಿರುವುದು ಎರಡೇ ಮಾರ್ಗ, ಒಂದು ಬೆದರಿಕೆ ಒಡ್ಡುವುದು, ಇಲ್ಲವೇ ಕುದುರೆ ವ್ಯಾಪಾರ ಮಾಡುವುದು. ಆಪರೇಷನ್ ಕಮಲ ಮೂಲಕ ಏಳು ಶಾಸಕರನ್ನು ಸೆಳೆಯಲು ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ ಎಂದು ಸುರೇಶ್ ತಿಳಿಸಿದರು.

ಐಟಿ ಅಧಿಕಾರಿಗಳು ಈವರೆಗೆ ಯಾವ ಪ್ರಕರಣಗಳಲ್ಲಿಯೂ ಸ್ಪಷ್ಟಣೆ ನೀಡಿಲ್ಲ. ಆದರೆ, ಯಡಿಯೂರಪ್ಪ ವಿಚಾರದಲ್ಲಿ ಮಾತ್ರ ಸ್ಪಷ್ಟಣೆ ನೀಡುತ್ತಿದ್ದಾರೆ. ಬಿಜೆಪಿ ಯಾವ ರೀತಿ ತನ್ನ ಆಡಳಿತವನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ಗೊತ್ತು. ನಮ್ಮನ್ನು ಬಂಧಿಸಿದರೆ ಯಾವ ಭಯವು ಇಲ್ಲ. ಬಂಧಿಸಿದರೆ ಇನ್ನೂ ಒಳ್ಳೆಯದೆ, ನಮಗೂ ರಾಜಕಾರಣ ಗೊತ್ತು ಎಂದು ಅವರು ಹೇಳಿದರು.

ಸಿಬಿಐ ಅಧಿಕಾರಿಗಳು ನಮ್ಮನ್ನು ಯಾವ ರೀತಿಯಲ್ಲಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಗೊತ್ತು. ನನಗೂ ನೋಟಿಸ್ ಕಳುಹಿಸಿದ್ದರು. ಕಳೆದ 10 ದಿನಗಳ ಹಿಂದೆ ಸಿಬಿಐ ಎದುರು ಹಾಜರಾಗಿ, ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ಮೋದಿಯ ಗಮನ ಸೆಳೆಯುತ್ತೇನೆ. ಆದುದರಿಂದ, ಪ್ರಧಾನಿ ಭೇಟಿಗೆ ಕಾಲಾವಕಾಶ ಕೋರಿದ್ದೇನೆ ಎಂದು ಸುರೇಶ್ ತಿಳಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದಲ್ಲಿ ದ್ವೇಷದ ರಾಜಕಾರಣ ಬೆಳೆದಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ವೀರಭದ್ರಸಿಂಗ್, ಮಮತಾ ಬ್ಯಾನರ್ಜಿ ಎಲ್ಲರಿಗೂ ಬಿಜೆಪಿಯವರು ತೊಂದರೆ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ನಾರಾಯಣ ರಾಣೆ ಮೇಲೆ ಒತ್ತಡ ಹೇರಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡರು. ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಗುಜರಾತ್‌ನ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ್ದರಿಂದ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುರೇಶ್ ದೂರಿದರು.

‘ಡಿ.ಕೆ.ಸಹೋದರರ ಮೇಲೆ ಹಲವಾರು ಭ್ರಷ್ಟಾಚಾರದ ಆರೋಪಗಳಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಿದೆ. ರಾಜ್ಯದ ಜನತೆಯ ಒಳಿತಿಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಬಿಐ ಅಧಿಕಾರಿಗಳಿಗೆ 2017ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬರೆದಿದ್ದಾರೆ ಎನ್ನಲಾದ ಪತ್ರ’ವನ್ನು ಇದೇ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್ ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News