ಬೆಂಗಳೂರಿನಲ್ಲಿಯೇ ವೈಮಾನಿಕ ಪ್ರದರ್ಶನ: ಮನವಿಗೆ ಸ್ಪಂದಿಸಿದ ಕೇಂದ್ರ ಸರಕಾರ

Update: 2018-09-08 12:41 GMT

ಬೆಂಗಳೂರು, ಸೆ. 8: ಬೆಂಗಳೂರು ನಗರದಲ್ಲಿ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನ ಉತ್ತರ ಪ್ರದೇಶಕ್ಕೆ ಸ್ಥಳಾಂತರಗೊಂಡಿದೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದು, ನಗರದ ಯಲಹಂಕ ಬಳಿ ಮುಂದಿನ ವರ್ಷ ವೈಮಾನಿಕ ಪ್ರದರ್ಶನ ನಡೆಯುವುದು ಖಚಿತವಾಗಿದೆ.

ಬೆಂಗಳೂರು ನಗರದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ 11 ಬಾರಿ ಯಶಸ್ವಿಯಾಗಿ ವೈಮಾನಿಕ ಪ್ರದರ್ಶನ ನಡೆದಿತ್ತು. ಆದರೆ, ಅದನ್ನು ಈ ಬಾರಿ ಉತ್ತರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗುತ್ತದೆ ಎಂಬ ಚರ್ಚೆ ನಡೆದಿತ್ತು. ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಆಡಳಿತ ಹಾಗೂ ವಿಪಕ್ಷಗಳ ನಾಯಕರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿದ್ದರಿಂದ ಇಲ್ಲಿಯೇ ಪ್ರದರ್ಶನ ನಡೆಸಲು ಕೇಂದ್ರ ಸರಕಾರ ನಿರ್ಧರಿಸಿದೆ.

ರಾಜ್ಯದ ಜನರ ಮನವಿಗೆ ಸ್ಪಂದಿಸಿದ ಕೇಂದ್ರ ಸರಕಾರ 2019 ರ ಫೆಬ್ರವರಿ 20 ರಿಂದ 24 ರವರೆಗೆ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ವೈಮಾನಿಕ ಪ್ರದರ್ಶನ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಮತ್ತೊಂದು ಬಾರಿ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲವರವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅಲ್ಲದೆ, ವೈಮಾನಿಕ ಪ್ರದರ್ಶನ ಕೈ ತಪ್ಪಲಿದೆ ಎಂಬ ಊಹಾಪೋಹಗಳಿಗೆ ರಕ್ಷಣಾ ಇಲಾಖೆ ಅಂತ್ಯವಾಡಿದೆ.

ವೈಮಾನಿಕ ಪ್ರದರ್ಶನಕ್ಕೆ ಎಲ್ಲ ರೀತಿಯ ಅನುಕೂಲವಿರುವ ಹಿನ್ನೆಲೆಯಲ್ಲಿ ಹಲವಾರು ವರ್ಷಗಳಿಂದ ಪ್ರದರ್ಶನವನ್ನು ನಡೆಸಲಾಗುತ್ತಿದೆ. ಈ ಹಿಂದೆ ರಕ್ಷಣಾ ಸಚಿವರಾಗಿದ್ದ ಮನೋಹರ್ ಪಾರಿಕ್ಕರ್ ಗೋವಾಗೆ ಸ್ಥಳಾಂತರ ಮಾಡಲು ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಆದರೆ, ಆಗಲೂ ತೀವ್ರ ವಿರೋಧ ವ್ಯಕ್ತವಾಗಿದ್ದಕ್ಕೆ ಬಿಟ್ಟಿದ್ದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆ ಪ್ರವೇಶಿಸಿದ್ದು, ಸ್ಥಳಾಂತರ ವಿಷಯದ ಕುರಿತು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸಂಬಂಧ ಪ್ರಧಾನಿಯೊಂದಿಗೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಇದೀಗ 2019ರ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲೇ ನಡೆಯುವುದು ಅಧಿಕೃತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News