ಮತ್ತೆ ಭಾರತಕ್ಕೆ ಸೆಡ್ಡು: ಬಿಮ್ಸ್‌ಟೆಕ್ ಕಾರ್ಯಾಚರಣೆಯಿಂದ ಹಿಂದೆ ಸರಿದ ನೇಪಾಳ

Update: 2018-09-09 04:07 GMT

ಹೊಸದಿಲ್ಲಿ, ಸೆ. 9: ಚೀನಾದ ಬಂದರು ಬಳಸಿಕೊಳ್ಳುವ ಬಗ್ಗೆ ಆ ದೇಶದ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ವ್ಯಾಪಾರ ಮಾರ್ಗದಲ್ಲಿ ಭಾರತದ ಏಕಸ್ವಾಮ್ಯ ಅಂತ್ಯಕ್ಕೆ ಕಾರಣವಾದ ಪುಟ್ಟ ಹಿಮಾಲಯನ್ ದೇಶ ಇದೀಗ ಮತ್ತೆ ಭಾರತಕ್ಕೆ ಸೆಡ್ಡು ಹೊಡೆದಿದೆ.

ಈ ತಿಂಗಳ 10ರಿಂದ 16ರವರೆಗೆ ಪುಣೆಯಲ್ಲಿ ನಡೆಯುವ ಮೊಟ್ಟಮೊದಲ ಬಿಮ್ಸ್‌ಟೆಕ್ಸ್ (ಬೇ ಆಫ್ ಬೆಂಗಾಲ್ ಇನೀಶಿಯೇಟಿವ್ ಫಾರ್ ಮಲ್ಟಿ ಸೆಕ್ಟರಲ್ ಟೆಕ್ನಿಕಲ್ ಆ್ಯಂಡ್ ಎಕನಾಮಿಕ್ ಕೋ ಆಪರೇಶನ್) ಭಯೋತ್ಪಾದನಾ ವಿರೋಧಿ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳದಿರಲು ನೇಪಾಳ ನಿರ್ಧರಿಸಿದೆ.

ಭಾರತ ಆಯೋಜಿಸಿರುವ ಮಿಲೆಕ್ಸ್-2018ಗೆ ಕೇವಲ ಮೂವರು ವೀಕ್ಷಕರನ್ನಷ್ಟೇ ನೇಪಾಳ ಕಳುಹಿಸಿಕೊಟ್ಟಿದೆ. ಈ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್ ಹಾಗೂ ಶ್ರೀಲಂಕಾದಿಂದ ತಲಾ 30 ಸೈನಿಕರು ಇದರಲ್ಲಿ ಪಾಲ್ಗೊಂಡಿದ್ದಾರೆ. ಪೂರ್ವನಿಗದಿತ ಬದ್ಧತೆ ಕಾರಣ ನೀಡಿ ಥಾಯ್ಲೆಂಡ್ ಕೂಡಾ ವೀಕ್ಷಕರನ್ನು ಮಾತ್ರ ಕಳುಹಿಸಿಕೊಡುತ್ತಿದೆ.

ನೇಪಾಳದ ಸೇನಾ ಮುಖ್ಯಸ್ಥ ಪೂರ್ಣಚಂದ್ರ ಥಾಪಾ ಕೂಡಾ ಈ ಜಂಟಿ ಕಾರ್ಯಾಚರಣೆಯ ಸಮಾರೋಪಕ್ಕೆ ಆಗಮಿಸಬೇಕಿತ್ತು. ಅವರು ಕೂಡಾ ತಮ್ಮ ಭೇಟಿ ರದ್ದು ಮಾಡಿದ್ದಾರೆ. "ಭಾರತದಲ್ಲಿ ನಡೆಯುವ ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳದಿರಲು ನೇಪಾಳ ಸರ್ಕಾರ ಅಧಿಕೃತ ನಿರ್ಧಾರ ಕೈಗೊಂಡಿದೆ" ಎಂದು ಪ್ರಧಾನಿ ಕೆ.ಪಿ.ಶರ್ಮಾ ಓಲಿಯವರ ಪತ್ರಿಕಾ ಸಲಹೆಗಾರ ಕುಂದನ್ ಅರ್ಯಾಲ್ ಹೇಳಿದ್ದಾರೆ ಎಂದು ತಿಳಿದುಬಂದಿದೆ. ತಮ್ಮದೇ ಪಕ್ಷದ ಮುಖಂಡರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚೀನಾ ಪರ ನಿಲುವಿಗೆ ಹೆಸರಾದ ಪ್ರಧಾನಿ ಈ ನಿರ್ಧಾರ ಕೈಗೊಂಡರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News