ಬಿಜೆಪಿ ಸಂಕಲ್ಪದಲ್ಲಿ 2022ರ ವೇಳೆಗೆ ಹೊಸ ಭಾರತ ನಿರ್ಮಾಣದ ಭರವಸೆ: ರಾಮ ಮಂದಿರದ ಬಗ್ಗೆ ಚರ್ಚೆಯೇ ಇಲ್ಲ!

Update: 2018-09-09 14:13 GMT

ಹೊಸದಿಲ್ಲಿ, ಸೆ.9: ಶನಿವಾರದಂದು ಪಕ್ಷದ ಸಂಕಲ್ಪವನ್ನು ಜಾರಿ ಮಾಡಿದ ಬಿಜೆಪಿ 2022ರ ವೇಳೆಗೆ ಹೊಸ ಭಾರತವನ್ನು ನಿರ್ಮಿಸಲು ಕಟಿಬದ್ಧವಾಗಿರುವುದನ್ನು ಪುನರುಚ್ಛರಿಸಿದೆ.

ವಿಪಕ್ಷಕ್ಕೆ ಸರಿಯಾದ ನಾಯಕರೂ ಇಲ್ಲ, ನೀತಿಯೂ ಇಲ್ಲ ಎಂದು ವ್ಯಂಗ್ಯವಾಡಿರುವ ಬಿಜೆಪಿ ಈಗಲೂ ನರೇಂದ್ರ ಮೋದಿ ದೇಶದ ಜನಪ್ರಿಯ ನಾಯಕರಾಗಿದ್ದಾರೆ ಎಂದು ಪ್ರತಿಪಾದಿಸಿದೆ. ಸದ್ಯ ನಡೆಯುತ್ತಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಗೃಹಸಚಿವ ರಾಜನಾಥ ಸಿಂಗ್ ರಾಜಕೀಯ ಸಂಕಲ್ಪವನ್ನು ಪ್ರಸ್ತುತಪಡಿಸಿದರು. ಕೇಸರಿ ಪಡೆಯನ್ನು ಸೋಲಿಸುವ ವಿಪಕ್ಷಗಳ ಯೋಜನೆ ಕೇವಲ ಹಗಲುಗನಸಾಗಿದೆ ಎಂದು ಬಿಜೆಪಿ ಕುಹಕವಾಡಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್, ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ ಮತ್ತು 2022ರ ವೇಳೆಗೆ ಹೊಸ ಭಾರತದ ನಿರ್ಮಾಣ ಮಾಡಲಾಗುವುದು ಎಂದರು. ಈ ಸರಕಾರಕ್ಕೆ ದೃಷ್ಟಿಕೋನವಿದೆ, ಬದ್ಧತೆಯಿದೆ ಮತ್ತು ಕಲ್ಪನೆಯಿದೆ. ನಮ್ಮ ಸರಕಾರದ ಕೆಲಸ ಎಲ್ಲರಿಗೂ ಕಾಣುವಂತದ್ದಾಗಿದೆ. 2022ರ ವೇಳೆಗ ಭಾರತ ಭಯೋತ್ಪಾದನೆ, ಜಾತೀಯತೆ, ಕೋಮುವಾದದಿಂದ ಮುಕ್ತವಾಗಲಿದೆ ಮತ್ತು ಎಲ್ಲರ ತಲೆಯ ಮೇಲೆಯೂ ಸೂರಿರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಇದೇ ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾವಡೆಕರ್, ಸಭೆಯಲ್ಲಿ ರಫೆಲ್ ಒಪ್ಪಂದದ ಕುರಿತು ಚರ್ಚೆಯಾಗಿಲ್ಲ. ಅದರ ಅಗತ್ಯವೂ ಇರಲಿಲ್ಲ. ಈ ಒಪ್ಪಂದದಲ್ಲಿ ಭಷ್ಟಾಚಾರ ನಡೆದಿದೆ ಎಂದು ಆರೋಪಿಸುವ ಜನರು ತಿಳಿದುಕೊಳ್ಳಬೇಕಾದ ವಿಷಯವೆಂದರೆ ಈ ಒಪ್ಪಂದಲ್ಲಿ ಕಟ್ರೋಚ್ಚಿಯಂಥ ಮಧ್ಯವರ್ತಿಗಳು ಇರಲಿಲ್ಲ ಎಂಬುದನ್ನು ಎಂದು ತಿಳಿಸಿದ್ದಾರೆ. 2019ರ ಲೋಕಸಭಾ ಚುನಾವಣಾ ವಿಷಯವಾಗಿ ಬಿಜೆಪಿ ರಾಮ ಮಂದಿರವನ್ನು ಪರಿಗಣಿಸಲಿದೆ ಎಂಬ ಊಹಾಪೋಹಾಗಳಿಗೆ ತೆರೆಯೆಳೆದ ಜಾವಡೆಕರ್, ಸಭೆಯಲ್ಲಿ ರಾಮ ಮಂದಿರದ ಬಗ್ಗೆಯೂ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News