ವಿಧಾನಸಭೆ ಸಚಿವಾಲಯದಲ್ಲಿ ನಾಪತ್ತೆಯಾಗಿದ್ದ ಕಡತಗಳು ಪತ್ತೆ

Update: 2018-09-09 14:21 GMT

ಬೆಂಗಳೂರು, ಸೆ. 9: ವಿಧಾನಸಭೆ ಸಚಿವಾಲಯದಲ್ಲಿ ನಾಪತ್ತೆಯಾಗಿದ್ದ ಕಡತಗಳು ಕೊನೆಗೂ ಪತ್ತೆಯಾಗಿದ್ದು, ಶಾಸಕರ ಭವನದಲ್ಲಿರಿಸಲಾಗಿದ್ದ ಕೆಲ ಪ್ರಮುಖ ಕಡತಗಳು ಲಭ್ಯವಾಗಿವೆ. ಆ ಎಲ್ಲ ಕಡತಗಳನ್ನು ಸ್ಪೀಕರ್ ಕಚೇರಿ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.

ಜಂಟಿ ಕಾರ್ಯದರ್ಶಿ ಅಧಿಕೃತ ಕೊಠಡಿ ಒಡೆದು ವಿಧಾನಸಭಾ ಕಾರ್ಯದರ್ಶಿ ಎಸ್.ಮೂರ್ತಿ ಅಕ್ರಮವಾಗಿ ಕಡತಗಳನ್ನು ವಶಕ್ಕೆ ಪಡೆದಿದ್ದು, ತಮ್ಮ ಅಧಿಕಾರ ಮೊಟಕುಗೊಳಿಸಲಾಗಿದೆ ಎಂದು ಈ ಹಿಂದೆ ಜಂಟಿ ಕಾರ್ಯದರ್ಶಿ ಶಶಿಕಲಾ ಭಟ್ ಆರೋಪಿಸಿದ್ದರು. ಅಲ್ಲದೆ ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಬೆಳವಣಿಗೆ ನಂತರ ಕಡತಗಳನ್ನು ಸ್ಪೀಕರ್ ಕಚೇರಿಗೆ ಒಪ್ಪಿಸುವಂತೆ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿಗೆ ಸೂಚನೆ ನೀಡಲಾಗಿತ್ತು. ಈಗ ಈ ಕಡತಗಳು ಶಾಸಕರ ಭವನದಲ್ಲಿ ಪತ್ತೆಯಾಗಿದ್ದು, ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಕಡತಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.

ಮೂರ್ತಿ ವಿರುದ್ಧ ದೂರು: ವಿಧಾನಸೌಧದ ವಜ್ರಮಹೋತ್ಸವ ಖರ್ಚು-ವೆಚ್ಚ, ಬೆಳಗಾವಿ ಸುವರ್ಣಸೌಧ ಅಧಿವೇಶನದ ಖರ್ಚು-ವೆಚ್ಚ, ಸಚಿವಾಲಯದಿಂದ ಹಲವು ಸಾಮಗ್ರಿ ಖರೀದಿಸಿರುವ ಹಾಗೂ ಟೆಂಡರ್ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಕಡತಗಳು ನಾಪತ್ತೆಯಾಗಿದ್ದವು ಎಂದು ದೂರು ನೀಡಲಾಗಿತ್ತು.

ವಜ್ರಮಹೋತ್ಸವ, ಬೆಳಗಾವಿ ಅಧಿವೇಶನದ ಖರ್ಚು-ವೆಚ್ಚಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದ ಕಡತಗಳು ನಾಪತ್ತೆಯಾಗಿದ್ದ ಹಿನ್ನಲೆ ಕುತೂಹಲ ಸೃಷ್ಟಿಸಿತ್ತು. ಇದೀಗ ಖಚಿತ ಮಾಹಿತಿ ಮೇರೆಗೆ ಶಾಸಕರ ಭವನದಲ್ಲಿ ಸಂಗ್ರಹಿಸಿಟ್ಟಿದ್ದ ಕಡತಗಳನ್ನು ಸ್ಪೀಕರ್ ನಿರ್ದೇಶನದ ಮೇರೆಗೆ ವಶಪಡಿಸಿಕೊಂಡಿಸಿಕೊಳ್ಳಲಾಗಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News