ಜಯನಗರದ ಈದ್ಗಾ ಮೈದಾನದ ವಿವಾದ ಮತ್ತೆ ಸರಕಾರದ ಅಂಗಳಕ್ಕೆ

Update: 2018-09-09 14:26 GMT

ಬೆಂಗಳೂರು, ಸೆ. 9: ದಶಕಗಳು ಕಳೆದರೂ ನೆನೆಗುದಿಗೆ ಬಿದ್ದಿರುವ ಜಯನಗರ ನಾಲ್ಕನೆ ಬ್ಲಾಕ್‌ನ ಈದ್ಗಾ ಮೈದಾನ ಭೂಮಿಯ ಒಡೆತನದ ವಿವಾದವನ್ನು ಹೈಕೋರ್ಟ್ ಮತ್ತೆ ಸರಕಾರದ ಅಂಗಳಕ್ಕೆ ರವಾನಿಸಿದೆ. 

ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಬಿ. ವೀರಪ್ಪ ಅವರಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ, 2011ರಲ್ಲಿ ಆಗಿನ ಬಿಜೆಪಿ ಸರಕಾರ ವಕ್ಫ್ ಮಂಡಳಿ ಹೆಸರಿನಲ್ಲಿ ಖಾತೆ ಬದಲಾವಣೆ ಆದೇಶವನ್ನು ವಾಪಸ್ ಪಡೆದಿದ್ದ ಆದೇಶವನ್ನು ಅನೂರ್ಜಿತಗೊಳಿಸಿದೆ. ಅಲ್ಲದೆ, ಸರಕಾರ ಈ ವಿಷಯದಲ್ಲಿ ಮರುಪರಿಶೀಲನೆ ನಡೆಸಬೇಕು. ಸಂಬಂಧಿಸಿದ ಎಲ್ಲರಿಗೂ ನೋಟಿಸ್ ನೀಡಿ, ವಾದಗಳನ್ನು ಆಲಿಸಿ ನಂತರ ತೀರ್ಮಾನ ಕೈಗೊಳ್ಳಬೇಕು. ವಕ್ಫ್ ಮಂಡಳಿ, ಬಿಬಿಎಂಪಿ, ಜಯನಗರ ನಾಗರಿಕ ಸಮಿತಿ, ಮಸೀದಿ ಇ ಇಸ್ಲಾಂ ಬಾದಾ ಅಧ್ಯಕ ಸೇರಿದಂತೆ ಎಲ್ಲರೂ ತಮ್ಮ ವಾದಗಳನ್ನು ಏನೇ ಇದ್ದರೂ ಅವುಗಳನ್ನು ಸರಕಾರದ ಮುಂದೆ ಮಂಡಿಸಬಹುದು ಎಂದು ನ್ಯಾಯಾಲಯ ಆದೇಶಿಸಿದೆ.

ಮೈಸೂರಿನ ಮಹಾರಾಜರು ಇಸ್ಲಾಂ ಮತಸ್ಥರಿಗೆ ಸ್ಮಶಾನ ಮತ್ತು ಇನ್ನಿತರ ಧಾರ್ಮಿಕ ಕಾರ್ಯಗಳಿಗಾಗಿ ಜಯನಗರದ ನಾಲ್ಕನೆ ಬ್ಲಾಕ್‌ನಲ್ಲಿ 5 ಎಕರೆ 354 ಗುಂಟೆ ಭೂಮಿಯನ್ನು ನೀಡಿದ್ದರು. ಆರಂಭದಲ್ಲಿ ಅದನ್ನು ಕೇವಲ ಸ್ಮಶಾನಕ್ಕೆ ಬಳಸಲಾಗುತ್ತಿತ್ತು. ನಂತರ ಅದು ಈದ್ಗಾ ಮೈದಾನವಾಗಿ ಮಾರ್ಪಾಡಾಯಿತು. 1956ರಲ್ಲಿ ರಾಜ್ಯಗಳ ಪುರ್ನವಿಂಗಡಣೆ ನಂತರ ವಕ್ಫ್ ಕಾಯಿದೆ ಜಾರಿಗೆ ಬಂದಿತು. ಅದರನ್ವಯ ಸರಕಾರ ಆ ಜಾಗದ ಸರ್ವೇ ಮಾಡಿ ಅದನ್ನು ವಕ್ಫ್ ಆಸ್ತಿ ಎಂದು ಅಧಿಸೂಚನೆ ಹೊರಡಿಸಿತು. ನಗರ ಬೆಳೆದಂತೆ ಆ ಜಾಗದ ಸುತ್ತ ವಾಣಿಜ್ಯ ಮತ್ತು ವಸತಿ ಕಟ್ಟಡಗಳು ದೊಡ್ಡ ಪ್ರಮಾಣದ ತಲೆ ಎತ್ತತೊಡಗಿದವು. ಹೀಗಾಗಿ, ಮುಸ್ಲಿಂ ಬಾಂಧವರು ಕೂಡ ಅಲ್ಲಿ ಶವಗಳನ್ನು ಹೂಳುವುದನ್ನು ನಿಲ್ಲಿಸಿದರು. ನಂತರ 1970ರಲ್ಲಿ ಪಾಲಿಕೆ ಕೂಡ ಆ ಜಾಗದಲ್ಲಿ ಶವ ಸಂಸ್ಕಾರವನ್ನು ನಿಷೇಧಿಸಿತ್ತು.

ಈ ಮಧ್ಯೆ, 1965ರ ಜೂ. 7ರಂದು ಆ ಜಾಗ ತನಗೆ ಸೇರಿದ್ದು, ವಕ್ಫ್ ಮಂಡಳಿಗಲ್ಲ ಎಂದು ಬಿಬಿಎಂಪಿ ಹೈಕೋರ್ಟ್ ಮೋರೆ ಹೋಗಿತ್ತು. ಹೈಕೋರ್ಟ್ ಆ ಅರ್ಜಿ ವಜಾಗೊಳಿಸಿ, ಮೂಲತಃ ಭೂಮಿ ಯಾರಿಗೆ ಸೇರಿದ್ದು ಎನ್ನುವ ಬಗ್ಗೆ ಸಿವಿಲ್ ಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂದು ಆದೇಶಿಸಿತ್ತು. ಮತ್ತೆ 1976ರಲ್ಲಿ ಸರಕಾರ, ಆ ಭೂಮಿ ವಕ್ಫ್ ಮಂಡಳಿಗೆ ಸೇರಿದ್ದು ಎಂದು ಅಧಿಸೂಚನೆ ಹೊರಡಿಸಿತ್ತು. ಅದನ್ನೂ ಸಹ ಪಾಲಿಕೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

1982ರಲ್ಲಿ ರಸ್ತೆ ವಿಸ್ತರಣೆಗಾಗಿ ಪಾಲಿಕೆ ಈದ್ಗಾ ಮೈದಾನದ ಗೋಡೆ ಕೆಡವಲು ಮುಂದಾದಾಗ ದೊಡ್ಡ ಗಲಾಟೆ ನಡೆದಿತ್ತು. 1985ರಲ್ಲಿ ಭೂ ವ್ಯಾಜ್ಯವನ್ನು ಸೌಹಾರ್ದವಾಗಿ ಬಗೆಹರಿಸುವ ದೃಷ್ಠಿಯಿಂದ ಆಗಿನ ಸರಕಾರ, ಇಬ್ಬರು ಶಾಸಕರು, ಮೇಯರ್ ಹಾಗೂ ಕಾನೂನು ಸಚಿವರನ್ನು ಒಳಗೊಂಡ ಸಮಿತಿ ರಚಿಸಿತ್ತು. ಅದು ಹಲವು ಸಭೆ ನಡೆಸಿ ಪ್ರಯತ್ನಿಸಿತ್ತು. 1994ರಲ್ಲಿ ಕೆಎಂಸಿ ಕಾಯಿದೆ 1976ರ ಸೆಕ್ಷನ್ 96ರಡಿ ಬಿಎಂಪಿ ಆ ಭೂಮಿಯನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಖಾತೆ ಬದಲಾಯಿಸಿಕೊಡಲು ಆದೇಶ ನೀಡಿತ್ತು. 1999ರಲ್ಲಿ ಪಾಲಿಕೆ ವಕ್ಫ್ ಬೋರ್ಡ್ ಹೆಸರಿಗೆ ಖಾತೆ ಬದಲಾಯಿಸಿ ಹೊಸ ಖಾತೆ ನೀಡಿತ್ತು. ಅದನ್ನು ಪ್ರಶ್ನಿಸಿ 1999ರಲ್ಲಿ ಜಯನಗರ ನಾಗರಿಕರ ಸಮಿತಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅದಾದ ನಂತರ 2011ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ, ಏಕಾಏಕಿ ಖಾತೆ ವರ್ಗಾವಣೆ ಆದೇಶವನ್ನು ವಾಪಸ್ ಪಡೆದುಕೊಂಡಿತ್ತು. ಈ ಕ್ರಮ ವಿವಾದ ಭುಗಿಲೇಳಲು ಕಾರಣವಾಗಿತ್ತು. ಅದನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News