ಕವಿಗಳು ಸರಳ ಭಾಷೆಯಲ್ಲಿ ಕವಿತೆ ರಚಿಸಬೇಕು: ಪ್ರೊ.ಚಂದ್ರಶೇಖರ ಪಾಟೀಲ

Update: 2018-09-09 14:32 GMT

ಬೆಂಗಳೂರು, ಸೆ.9: ಕವಿಗಳು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ, ಸೂಕ್ಷ್ಮವಾಗಿ ಕವನಗಳನ್ನು ರಚನೆ ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನಿವೃತ್ತ ತಹಶೀಲ್ದಾರ್ ಹಾಗೂ ಸಾಹಿತಿ ಕೆ.ಎಂ.ರೇವಣ್ಣಗೆ ಅಭಿನಂದನೆ ಮತ್ತು ಎರಡು ಕೃತಿಗಳ ಲೋಕಾರ್ಪಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕವಿಗಳು ತಮ್ಮ ಭಾವನೆಗಳನ್ನು ಮೆಲುಕು ಹಾಕಿಕೊಳ್ಳುವ ಮೂಲಕ ಶಾಂತ ಸ್ಥಿತಿಯಲ್ಲಿ ಆಕಾರ, ಲಯ, ನುಡಿಗಟ್ಟುಗಳು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಕಾವ್ಯ ರಚಿಸಬೇಕು. ಅಲ್ಲದೆ, ಮೂಲಭಾಷೆಯನ್ನು ಅರ್ಥ ಮಾಡಿಕೊಂಡು, ಸಾಮಾನ್ಯ ಭಾಷೆಯಲ್ಲಿ ಕವಿತೆಯನ್ನು ಹೆಣೆಯಬೇಕು ಎಂದು ಅವರು ಹೇಳಿದರು.

ಕವಿಯಾದವರು ಹಕ್ಕಿಯಂತಾಗಬಾರದು, ಹಸುವಿನಂತಾಗಬೇಕು. ಹಸು ತಿಂದದ್ದನ್ನು ಮತ್ತೊಮ್ಮೆ ಮೆಲುಕು ಹಾಕಿ ರಸಪಾಕ ಮಾಡಿ ಹಾಲನ್ನು ಕರೆಯುತ್ತದೆ. ಅದೇ ರೀತಿಯಲ್ಲಿ ಕವಿಯಾದವರು ವಿಷಯಗಳನ್ನು ಮೊದಲು ಗ್ರಹಿಸಬೇಕು. ಅನಂತರ ಅದನ್ನು ಮೆಲುಕು ಹಾಕುತ್ತಾ ಪರಿಪಕ್ವವಾದ ಮೇಲೆ ಹೊರ ಹಾಕಬೇಕು. ಅವಸರವಾಗಿ ಹಸಿಬಿಸಿ ಭಾವನೆಗಳನ್ನು ತೆರೆದಿಡಬಾರದು. ಕವನಗಳು ಹಗ್ಗ ಹೊಸೆದಂತಿರಬಾರದು, ಬಟ್ಟೆಯನ್ನು ನೇಯ್ದಂತಿರಬೇಕು ಎಂಬ ಅಂಶವನ್ನು ಅವರ ಕೃತಿಯ ಮೂಲಕ ಪರಿಚಯಿಸಿದ್ದಾರೆ ಎಂದು ಚಂಪಾ ಶ್ಲಾಘಿಸಿದರು.

ಇತ್ತೀಚಿನ ದಿನಗಳಲ್ಲಿ ಧರ್ಮ ಎಂದರೆ ಭಯ ಹುಟ್ಟಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಧರ್ಮ ಎಂಬುದು ಅನುಕೂಲಕರವಾದ ಮೌಲ್ಯಗಳನ್ನು ಯಾರಿಗೂ ತೊಂದರೆಯಾಗದಂತೆ ಆಯ್ದುಕೊಳ್ಳುವುದು ಅಥವಾ ನಿಭಾಯಿಸುವುದು ಎಂಬುದಾಗಿದೆ. ಅದನ್ನು ಕಾವ್ಯ ಧರ್ಮ, ಸಾಹಿತ್ಯ ಧರ್ಮ, ಸಾಂಸ್ಕೃತಿಕ ಧರ್ಮ ಹೀಗೆ ಹಲವು ರೀತಿಯಲ್ಲಿ ಕಾಣುತ್ತೇವೆ. ಹೀಗಾಗಿ, ಸಾಹಿತ್ಯದ ಚೌಕಟ್ಟಿನ ವಿನ್ಯಾಸವನ್ನು ಅರ್ಥ ಮಾಡಿಕೊಂಡು ರೂಢಿಸಿಕೊಳ್ಳುವುದು ಕಾವ್ಯ ಧರ್ಮವಾಗಿದೆ ಎಂದರು.

ಲೇಖಕ ರೇವಣ್ಣ ಅವರ ಕಾವ್ಯ ಧರ್ಮ ಕೃತಿಯಲ್ಲಿ ಕಾವ್ಯ ಕಟ್ಟುವಾಗ ಯಾವ ಮೌಲ್ಯವನ್ನು ಕಂಡುಕೊಳ್ಳಬೇಕು ಎಂಬುದನ್ನು ವಿವರಿಸಿದ್ದಾರೆ. ಅಲ್ಲದೆ, ಮತ್ತೊಂದು ಕೃತಿ ‘ವಚನ ಯುಗದ ದಲಿತ ಶರಣರು’ ಕೃತಿಯಲ್ಲಿ ಮೇಲ್ಜಾತಿಗಳ ಶೋಷಣೆಯ ವಿರುದ್ಧ ಸಿಡಿದೆದ್ದ ವಚನಕಾರರು ಬಳಸಿದ ಭಾಷೆ, ತತ್ವಗಳ ಬಗ್ಗೆ ತಿಳಿಸಿದ್ದಾರೆ ಎಂದ ಅವರು, ಇತ್ತೀಚಿಗೆ ಮಹತ್ತರ ಸಾಧನೆ ಮಾಡಿದವರ ಜಾತಿ ಹುಡುಕುವ ರೋಗ ಹರಡುತ್ತಿರುವುದು ಅಸಹ್ಯವೆನಿಸುತ್ತದೆ ಎಂದು ವಿಶ್ಲೇಷಿಸಿದರು.

ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ದೇಶದಲ್ಲಿಂದು ಧಾರ್ಮಿಕ ಉಗ್ರವಾದ ಹಾಗೂ ಸಾಂಸ್ಕೃತಿಕ ಭಯೋತ್ಪಾದನೆ ನಡುವೆ ಬದುಕುತ್ತಿದ್ದೇವೆ. ಸಾಹಿತಿಗಳು, ಲೇಖಕರು ಸೇರಿದಂತೆ ಪ್ರತಿಯೊಬ್ಬರೂ ಮಾತನಾಡುವ ಮುನ್ನ ಯೋಚನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ನಡೆದ ಪತ್ರಕರ್ತೆ ಗೌರಿ ಲಂಕೇಶ್ ನೆನಪಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ‘ನಾನು ನಗರ ನಕ್ಸಲ್’ ಎಂಬುದಕ್ಕೆ ಅನಗತ್ಯವಾಗಿ ಅವರ ಮೇಲೆ ದೂರು ದಾಖಲಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಘಪರಿವಾರ ಹಾಗೂ ಆರೆಸ್ಸೆಸ್ ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ನಗರ ನಕ್ಸಲ್ ಎಂಬ ಪದವನ್ನು ಹುಟ್ಟಿ ಹಾಕಿದ್ದಾರೆ. ಅಲ್ಲದೆ, ಕೇಂದ್ರ ಸರಕಾರ ಹಾಗೂ ಮೋದಿ ವಿರುದ್ಧವಾಗಿ ಮಾತನಾಡುವವರನ್ನು ದೇಶದ್ರೋಹಿ, ನಕ್ಸಲ್ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಕಳೆದ ಮೂರು ದಿನಗಳ ಹಿಂದೆ ತಮಿಳುನಾಡಿನಲ್ಲಿ ಯುವತಿಯೊಬ್ಬರು ವಿಮಾನ ನಿಲ್ದಾಣದಲ್ಲಿ ಮೋದಿ ಮತ್ತು ಆರೆಸ್ಸೆಸ್‌ಗೆ ಧಿಕ್ಕಾರ ಕೂಗಿದರು ಎಂಬ ಕಾರಣಕ್ಕೆ ಅವರನ್ನು ಬಂಧಿಸಿದ್ದಾರೆ. ಇಂದು ಯಾವ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದರು.

ಪ್ರಜಾಪ್ರಭುತ್ವ ದೇಶದಲ್ಲಿ ಕೆಲವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೈಜಾಕ್ ಮಾಡಲಾಗಿದ್ದು, ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದೇವೆ. ತೆರಿಗೆ ಸಂಗ್ರಹ ಮಾಡಿ, ಬಜೆಟ್ ಮಂಡಿಸುವುದಷ್ಟೇ ಸರಕಾರದ ಕೆಲಸವಲ್ಲ. ಅದಕ್ಕೆ ಸಾಂಸ್ಕೃತಿಕ ನೀತಿಯಿದ್ದು, ಅದನ್ನು ಕಾಪಾಡಬೇಕಾದ ಜವಾಬ್ದಾರಿಯಿದೆ. ಆದರೆ, ಇಂದು ಪ್ರಭುತ್ವವನ್ನು ಪ್ರಶ್ನಿಸುವವರ ಮೇಲೆ ದಾಳಿ ನಡೆಯುತ್ತಿದೆ. ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ಆದಾಯ ಪ್ರಮಾಣ ಕಡಿಮೆಯಾಗಿ, ಅಗತ್ಯ ವಸ್ತುಗಳ ಪ್ರಮಾಣ ಅಧಿಕವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೈಗಾರಿಕ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಶಿಕ್ಷಣ ತಜ್ಞ ಈ.ಕೃಷ್ಣಪ್ಪ, ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಎಸ್.ರಾಮಲಿಂಗೇಶ್ವರ ಉಪಸ್ಥಿತರಿದ್ದರು. ಇದೇ ವೇಳೆ ಲೇಖಕ ಕೆ.ಎಂ.ರೇವಣ್ಣ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News