ಕಥುವಾ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಉಸಿರುಗಟ್ಟಿಸಿ ಕೊಲ್ಲಲಾಗಿತ್ತು: ವೈದ್ಯರ ಹೇಳಿಕೆ

Update: 2018-09-09 14:38 GMT

ಪಠಾಣಕೋಟ್,ಸೆ.9: ಕಥುವಾ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಎಂಟರ ಹರೆಯದ ಬಲಿಪಶು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಮತ್ತು ಉಸಿರುಗಟ್ಟುವಿಕೆಯಿಂದ ಆಕೆಯ ಸಾವು ಸಂಭವಿಸಿತ್ತು ಎಂದು ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಇಲ್ಲಿಯ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.

ಬಾಲಕಿಯ ಕುಟುಂಬದ ಮನವಿಯ ಮೇರೆಗೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪ್ರಕರಣವನ್ನು ಜಮ್ಮುವಿನ ಕಥುವಾದಿಂದ ಪಠಾಣಕೋಟ್‌ನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ನ್ಯಾ.ತೇಜವಿಂದರ್ ಸಿಂಗ್ ಅವರು ನಡೆಸುತ್ತಿರುವ ಪ್ರಕರಣದ ವಿಚಾರಣೆಯಲ್ಲಿ ಈವರೆಗೆ 54 ಸಾಕ್ಷಿಗಳು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಬಾಲಕಿಯ ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಇತ್ತೀಚಿಗೆ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದು,ಇದು ಪ್ರಕರಣವನ್ನು ಇನ್ನಷ್ಟು ಬಲಗೊಳಿಸಿದೆ. ಕ್ರೈಂ ಬ್ರಾಂಚ್ ಸಲ್ಲಿಸಿರುವ ಸಾಕ್ಷಾಧಾರ ತನಗೆ ತುಂಬ ತೃಪ್ತಿಯನ್ನು ನೀಡಿದೆ ಎಂದು ವಿಶೇಷ ಸರಕಾರಿ ಅಭಿಯೋಜಕ ಜೆ.ಕೆ.ಚೋಪ್ರಾ ತಿಳಿಸಿದರು.

ಪ್ರಕರಣದ ಪ್ರಮುಖ ಆರೋಪಿ ಸಾಂಜಿರಾಮ್ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆರು ಜನರು ಬಂಧನದಲ್ಲಿದ್ದಾರೆ.

ಕಳೆದ ಜ.10ರಂದು ಬಾಲಕಿಯನ್ನು ಅಪಹರಿಸಲಾಗಿದ್ದು,ಜ.14ರಂದು ಆಕೆಯನ್ನು ಕೊಲ್ಲುವ ಮುನ್ನ ಪದೇಪದೇ ಅತ್ಯಾಚಾರ ನಡೆಸಲಾಗಿತ್ತು . ಜ.17ರಂದು ಕಥುವಾ ಸಮೀಪ ಅರಣ್ಯ ಪ್ರದೇಶದಲ್ಲಿ ಆಕೆಯ ಶವ ಪತ್ತೆಯಾಗಿತ್ತು ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News