ಡ್ರಗ್ ಸೇವನೆ ವಿರುದ್ಧದ ಜಾಗೃತಿಗೆ ಡಿಸಿಎಂ ಪರಮೇಶ್ವರ್ ಚಾಲನೆ

Update: 2018-09-09 14:39 GMT

ಬೆಂಗಳೂರು, ಸೆ. 9: ಮಾದಕ ದ್ರವ್ಯದ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಜಯನಗರದ ಶಾಲಿನಿ ಮೈದಾನದಲ್ಲಿ ಏರ್ಪಡಿಸಿದ್ದ ವಿಂಟೇಜ್ ಕಾರ್ ರ್ಯಾಲಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು.

ರವಿವಾರ ನಗರದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪರಮೇಶ್ವರ್, ಡ್ರಗ್ ಸೇವನೆ ವಿರುದ್ಧ ದೊಡ್ಡ ಆಂದೋಲನವನ್ನೇ ಪ್ರಾರಂಭಿಸಿದ್ದೇವೆ. ಪೊಲೀಸ್ ಇಲಾಖೆ ವತಿಯಿಂದ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದೆ. ಇದರ ಭಾಗವಾಗಿ ಜಯನಗರದಲ್ಲಿ ಕಾರ್ ರ್ಯಾಲಿಗೆ ಚಾಲನೆ ನೀಡಲಾಗಿದೆ ಎಂದರು.

ಗಾಂಜಾ, ಆಫೀಮು ಸೇವನೆ ಸೇರಿದಂತೆ ಡ್ರಗ್ಸ್ ಸೇವನೆಯಿಂದ ಯುವಕರು ಇಡೀ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು ಹಾಗೂ ಅವರ ಪೋಷಕರು ಈ ಬಗ್ಗೆ ಸೂಕ್ತ ನಿಗಾ ವಹಿಸಬೇಕು ಎಂದು ಪರಮೇಶ್ವರ್ ಇದೇ ವೇಳೆ ಸಲಹೆ ಮಾಡಿದರು.

ಗಣೇಶ ಚತುರ್ಥಿಗಾಗಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಈಗಾಗಲೇ ಪೊಲೀಸ್ ಆಯುಕ್ತರು ಕ್ರಮ ವಹಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಯಾರೂ ಗಲಭೆ ಅವಕಾಶವಿಲ್ಲದಂತೆ ಗಣೇಶನ ಹಬ್ಬ ಆಚರಣೆ ಮಾಡಬೇಕು ಎಂದು ಅವರು ಪರಮೇಶ್ವರ್ ಮನವಿ ಮಾಡಿದರು.

ಕೇಂದ್ರ ಸರಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ

‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಸುಲಲಿತವಾಗಿ ಆಡಳಿತ ನಡೆಸುತ್ತಿರುವುದು ಬಿಜೆಪಿ ಅವರಿಗೆ ಹೊಟ್ಟೆಉರಿ ತರಿಸಿದೆ. ಹೀಗಾಗಿ ಅವರು ಸರಕಾರದ ಬಗ್ಗೆ ಅನಗತ್ಯ ಹೇಳಿಕೆ ನೀಡುತ್ತಾರೆ. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೇಂದ್ರ ಸರಕಾರ ಇಡಿ, ಸಿಬಿಐನಂಥ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ’

-ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News