ಪುರುಷರು ಅನಾಗರಿಕ ವ್ಯವಸ್ಥೆ ಕಡೆಗೆ ವಾಲುತ್ತಿದ್ದಾರೆ: ಡಾ.ಭೈರಮಂಗಲ ರಾಮೇಗೌಡ

Update: 2018-09-09 14:47 GMT

ಬೆಂಗಳೂರು, ಸೆ.9: ಇತ್ತೀಚಿನ ದಿನಗಳಲ್ಲಿ ಪುರುಷರು ಅನಾಗರಿಕ ವ್ಯವಸ್ಥೆ ಕಡೆ ವಾಲುತ್ತಿದ್ದಾರೆ ಎಂದು ವಿಮರ್ಶಕ ಡಾ.ಭೈರಮಂಗಲ ರಾಮೇಗೌಡ ಹೇಳಿದ್ದಾರೆ.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಿದ್ದ ಎಚ್.ಎಸ್.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಧುನೀಕರಣ ಯುಗದಲ್ಲಿ ದಿನದಿಂದ ದಿನಕ್ಕೆ ಪುರುಷರು ಅನಾಗರಿಕ ವ್ಯವಸ್ಥೆ ಕಡೆ ಹೋಗುತ್ತಿದ್ದು, ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.

ಜಾಗತಿಕ ಯುಗದಲ್ಲಿ ಮಹಿಳೆಯರಿಗೆ ನಿಜವಾಗಿಯೂ ಸ್ವಾತಂತ್ರ ದೊರಕಿದೆಯಾ ಎಂಬುದು ಇಂದಿಗೂ ಅತಿದೊಡ್ಡ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಅನಾಗರಿಕ ಪುರುಷರ ಪ್ರಮಾಣ ಕಡಿಮೆಯಾಗದಿದ್ದರೆ ಮಹಿಳೆಗೆ ಸಂಪೂರ್ಣ ಸ್ವತಂತ್ರ ಸಿಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಡಾ.ಮಂಗಳಾ ಪ್ರಿಯದರ್ಶಿನಿ ಮಹಿಳಾ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ತ್ರೀವಾದದ ವಿವಿಧ ಆಯಾಮಗಳನ್ನು ತಮ್ಮ ಕೃತಿಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ ಎಂದು ಹೇಳಿದರು.

ಡಾ.ಮಂಗಳಾ ಪ್ರಿಯದರ್ಶಿನಿ ಅವರು ಪ್ರಾಚೀನ ಸಾಹಿತ್ಯದಿಂದ ಆರಂಭ ಮಾಡಿ ಇಂದಿನ ನವ್ಯ ಸಾಹಿತ್ಯದವರೆಗೂ ವಿವಿಧ ಆಯಾಮಗಳಲ್ಲಿ ಮಹಿಳೆಯರ ಸಮಸ್ಯೆಗಳು, ಸವಾಲುಗಳನ್ನು ಕಟ್ಟಿಕೊಟ್ಟಿದ್ದಾರೆ. ಸ್ತ್ರೀವಾದ, ಮಹಿಳಾ ಅಧ್ಯಯನ ಹಾಗೂ ಮಹಿಳಾ ಸಾಹಿತ್ಯಕ್ಕೆ ಗಟ್ಟಿಯಾದ ಬುನಾದಿ ಹಾಕಬೇಕೆಂಬ ಮುಂದಾಲೋಚನೆ ಇಟ್ಟುಕೊಂಡು ಇವರ ಕೃತಿಗಳಲ್ಲಿ ಸೀವಾದವನ್ನೇ ಹೆಚ್ಚಾಗಿ ಬಿಂಬಿಸಿದ್ದಾರೆ. ಕನ್ನಡದ ಕಾವ್ಯ ಸ್ವರೂಪಕ್ಕೂ ಹೊಸ ರೂಪ ನೀಡಿದ್ದಾರೆ ಎಂದು ತಿಳಿಸಿದರು.

ನಲವತ್ತು ವರ್ಷಗಳ ಅಧ್ಯಾಪಕಿಯಾಗಿದ್ದ ಸಂದರ್ಭದಲ್ಲಿ ಪದವಿ, ಸ್ನಾತಕೋತ್ತರ, ಐಎಎಸ್, ಕೆಎಎಸ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿದ್ದಾರೆ. ಅಲ್ಲದೆ, ‘ಸೀವಾದ ಮತ್ತು ಮಹಿಳಾ ಅಧ್ಯಯನ ಪ್ರವೇಶಿಕೆ’, ‘ಆಧುನಿಕ ಕನ್ನಡ ಕಾವ್ಯ ಸ್ವರೂಪ ’, ‘ಬೆಳೆಗೆರೆ ಪಾರ್ವತಮ್ಮ’ ,‘ಗಾನ ಕೋಗಿಲೆ ಪಂಚಾಕ್ಷರಿ ಗವಾಯಿಗಳು’ ಓದುಗರಿಗೆ ಅಚ್ಚುಮೆಚ್ಚಿನ ಕೃತಿಗಳನ್ನು ನೀಡಿದ್ದಾರೆ ಎಂದು ಬಣ್ಣಿಸಿದರು.

ವಿಜ್ಞಾನ ಸಾಹಿತಿ ಡಾ.ಟಿ.ಆರ್.ಅನಂತರಾಮು ಮಾತನಾಡಿ, ಓದುಗರಿಗೆ ಆಯ್ಕೆಗಳು ಮುಖ್ಯವಾಗಿರುತ್ತದೆ. ಓದುಗರ ಆಯ್ಕೆಗಳಿಗೆ ತಕ್ಕಂತೆ ಕೃತಿಗಳನ್ನು ರಚಿಸುವ ಹಾಗೂ ನವೋದಯ ಕಾವ್ಯ ದೃಷ್ಟಿಕೋನವನ್ನು ವಿಸ್ತಾರಗೊಳಿಸಿ ಡಾ.ಡಿ.ಮಂಗಳಾ ಪ್ರಿಯದರ್ಶನಿ ನಿಜಕ್ಕೂ ಜನಪರಕವಿಯಾಗಿ ರೂಪುಗೊಂಡಿದ್ದಾರೆ ಎಂದು ಹೇಳಿದರು.

ಡಾ.ಡಿ.ಮಂಗಳಾ ಪ್ರಿಯದರ್ಶಿನಿಯವರಿಗೆ ಎಚ್.ಎಸ್.ಪಾರ್ವತಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಬರಗೂರು ರಾಮಚಂದ್ರಪ್ಪ, ಹಿರಿಯ ಲೇಖಕಿ ಪ್ರೇಮಾಭಟ್, ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ,ರಂಗ ಕಲಾವಿದೆ ಡಾ.ಎಂ.ಎಸ್.ವಿದ್ಯಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News