ಪೂರ್ಣಚಂದ್ರ ತೇಜಸ್ವಿ ಜಾಗತೀಕರಣದ ವಿರುದ್ಧದ ಪ್ರತಿರೋಧದ ಸಂಕೇತ: ಪತ್ರಕರ್ತ ನಾಗೇಶ್ ಹೆಗಡೆ

Update: 2018-09-09 14:59 GMT

ಬೆಂಗಳೂರು, ಸೆ. 9: ಇಂದಿನ ಕೊಳ್ಳುಬಾಕ ಸಂಸ್ಕೃತಿ ಪರಿಸರ, ಜೀವ ವೈವಿಧ್ಯ, ಕನ್ನಡವನ್ನು ನಾಶ ಮಾಡುತ್ತಿರುವಾಗ ಪೂರ್ಣಚಂದ್ರ ತೇಜಸ್ವಿ, ಅದರ ಎದುರಿನ ಪ್ರತಿರೋಧದ ಸಂಕೇತ ಎಂದು ಪತ್ರಕರ್ತ ಹಾಗೂ ಅಂಕಣ ಬರಹಗಾರ ನಾಗೇಶ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ‘ಬಹುರೂಪಿ’ ಪ್ರಕಾಶನ ಪೂರ್ಣಚಂದ್ರ ತೇಜಸ್ವಿಯವರ 80ನೆ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಈ ಕಾರ್ಯಕ್ರಮದಲ್ಲಿ ಕೆ.ಎಸ್.ಪರಮೇಶ್ವರ ಅವರ ‘ತೇಜಸ್ವಿ ಸಿಕ್ಕರು’ ಕೃತಿಯನ್ನು ಬಿಡುಗಡೆ ಮಾಡಿ ನಾಗೇಶ್ ಹೆಗಡೆ ಮಾತನಾಡಿದರು. ತೇಜಸ್ವಿ ಮೊಗೆದಷ್ಟೂ ಮುಗಿಯದ ಜ್ಞಾನ ಭಂಡಾರ. ಅವರು ನಾಳೆ ಬರಲಿರುವ ಆತಂಕಗಳನ್ನು ಇಂದೆ ಗುರುತಿಸುವ ಶಕ್ತಿಯುಳ್ಳವರಾಗಿದ್ದರು. ಅಂತಹ ತೇಜಸ್ವಿ ಅವರ ಓದು ಜಾಗತೀಕರಣದ ಇಂದಿನ ದಿನಕ್ಕೆ ಉತ್ತರವಾಗಬೇಕು ಎಂದು ಅವರು ತಿಳಿಸಿದರು.

ಪತ್ರಕರ್ತ, ಸಾಹಿತಿ ಜಿ.ಎನ್.ಮೋಹನ್ ಮಾತನಾಡಿ ತೇಜಸ್ವಿ ಒಂದು ಪ್ರತಿರೋಧದ ಸಂಕೇತವಾಗಿದ್ದರು. ಅವರು ಕನ್ನಡಕ್ಕೆ ಯೂನಿಕೋಡ್ ಬೇಕು ಎಂದು ಪಟ್ಟ ಪರಿಶ್ರಮ ಕನ್ನಡವನ್ನು ಇಂದಿಗೂ ಹೊಸ ಪೀಳಿಗೆ ಉಸಿರಾಡಲು ದಾರಿಮಾಡಿಕೊಟ್ಟಿದೆ ಎಂದರು.

ಗ್ರಾಮೀಣ ಕುಟುಂಬದ ಮುಖ್ಯಸ್ಥ ಎಂ.ಎಚ್.ಶ್ರೀಧರ ಮೂರ್ತಿ ಮಾತನಾಡಿ, ತಾವು ನಡೆಸುತ್ತಿರುವ ಸಿರಿಧಾನ್ಯ ಚಳವಳಿಗೆ ತೇಜಸ್ವಿಯವರೇ ಸ್ಫೂರ್ತಿ. ಆಹಾರವೇ ಅಸ್ತ್ರ ಆಗಬೇಕಾದ ಕಾಲ ಬಂದಿದೆ ಎಂದರು. ಕೃತಿಕಾರ ಕೆ.ಎಸ್.ಪರಮೇಶ್ವರ, ರಂಗಕರ್ಮಿ ಸವಿತಾ, ನಿರ್ದೇಶಕ ಪರಮೇಶ್ವರ ಗುರುಸ್ವಾಮಿ, ಬಹುರೂಪಿಯ ಶ್ರೀಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News