ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ಪೂಜಿಸಿ: ಬಿಬಿಎಂಪಿ ಮೇಯರ್ ಸಂಪತ್ ರಾಜ್

Update: 2018-09-09 15:01 GMT

ಬೆಂಗಳೂರು, ಸೆ. 9: ಕುಡಿಯುವ ನೀರು ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ಸಾರ್ವಜನಿಕರು ಯಾವುದೇ ಕಾರಣಕ್ಕೂ ಖರೀದಿಸಬಾರದು ಎಂದು ಬಿಬಿಎಂಪಿ ಮೇಯರ್ ಸಂಪತ್‌ರಾಜ್ ಮನವಿ ಮಾಡಿದ್ದಾರೆ.

ರವಿವಾರ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕಬ್ಬನ್ ಉದ್ಯಾನವನ ದ್ವಾರದ ಬಳಿ ಬಿಬಿಎಂಪಿ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪರಿಸರ ಗಣಪತಿ ಹಬ್ಬ ಆಚರಣೆ ಸಂಬಂಧದ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಾಲಿನಲ್ಲಿ ಪರಿಸರಕ್ಕೆ ಪೂರಕವಾದ ಗಣಪತಿ ವಿಗ್ರಹಗಳನ್ನು ಪೂಜಿಸುವ ಕುರಿತು ಸಾರ್ವಜನಿಕರಲ್ಲಿ ಪಾಲಿಕೆ ವತಿಯಿಂದ ಅರಿವು ಮೂಡಿಸಲಾಗಿದೆ. ಗಣೇಶಮೂರ್ತಿ ಮಾರಾಟದ ಸ್ಥಳಗಳಲ್ಲೂ ತಿಳುವಳಿಕೆ ಮೂಡಿಸಲಾಗುತ್ತಿದೆ. ಹಾಗಾಗಿ ಶೇ.90ಕ್ಕಿಂತ ಹೆಚ್ಚು ಮಂದಿ ಪರಿಸರ ಗಣಪತಿಯನ್ನು ಕೊಂಡು ಸಾರ್ವಜನಿಕರು ಸಾಂಪ್ರದಾಯಿಕವಾಗಿ ಪೂಜಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಹೇಳಿದರು.

ಮಾರಾಟಗಾರರಿಗೂ ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಕಡ್ಡಾಯವಾಗಿ ಸೂಚಿಸಲಾಗಿದೆ ಎಂದ ಅವರು, ಬಿಬಿಎಂಪಿ ಕ್ಷೇಮಾಭಿವೃದ್ಧಿ ಸಂಘದವರು ಪರಿಸರ ಸ್ನೇಹಿ ಗಣಪನ ವಿಗ್ರಹಗಳನ್ನು ಉಚಿತವಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ಪಾಲಿಕೆ ಆವರಣದ ಗಾಜಿನ ಮನೆಯಲ್ಲಿ ಸ್ಥಳಾವಕಾಶ ನೀಡಿದರೆ ನಾಳೆಯಿಂದಲೇ ಉಚಿತವಾಗಿ ಪರಿಸರ ಸ್ನೇಹಿ ಗಣೇಶನಮೂರ್ತಿಯನ್ನು ವಿತರಿಸುವುದು ಎಂದರು.

ಉಪಮೇಯರ್ ಪದ್ಮಾವತಿ ಮಾತನಾಡಿ, ಚಿಕ್ಕಮಕ್ಕಳು ಬಣ್ಣ ಬಣ್ಣದ ಗಣಪತಿಗಳು, ಪಿಒಪಿ ವಿಗ್ರಹಗಳ ಬಗ್ಗೆ ಆಕರ್ಷಿತರಾಗುತ್ತಾರೆ. ಅವುಗಳನ್ನೆ ಕೊಳ್ಳುವಂತೆ ಹಠ ಹಿಡಿಯುವುದು ಸಹಜ. ಹೀಗಾಗಿ ತಂದೆ-ತಾಯಿ ಮಕ್ಕಳಿಗೆ ತಿಳಿ ಹೇಳಿ ಪರಿಸರ ಗಣಪತಿ ಪೂಜಿಸುವ ಬಗ್ಗೆ ಮನವರಿಕೆ ಮಾಡಬೇಕು, ಪರಿಸರ ಉಳಿಸಬೇಕು ಎಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News