ಇತ್ತೀಚಿನ ಜನಪ್ರತಿನಿಧಿಗಳ ಹೇಳಿಕೆಗಳು ಅಸಂಬದ್ಧ: ಡಾ.ಸಿದ್ದಲಿಂಗಯ್ಯ

Update: 2018-09-09 15:04 GMT

ಬೆಂಗಳೂರು, ಸೆ.9: ಇತ್ತೀಚಿಗೆ ಜನಪ್ರತಿನಿಧಿಗಳ ಹೇಳಿಕೆಗಳು ಅಸಂಬದ್ಧವಾಗಿದ್ದು, ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಲೋಹಿಯಾ ಸೇರಿದಂತೆ ದೇಶವನ್ನು ಕಟ್ಟಿದ ನಾಯಕರ ಚಿಂತನೆಗಳಿಗೆ ವ್ಯತಿರಿಕ್ತವಾಗಿವೆ ಎಂದು ಕವಿ ಡಾ.ಸಿದ್ದಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹುಡುಗರು ತಾವು ಪ್ರೀತಿ ಮಾಡುವ ಹುಡುಗಿಯರನ್ನು ಬಲವಂತವಾಗಿಯಾದರೂ ಅಪಹರಿಸಿಕೊಂಡು ಬನ್ನಿ, ನಾನು ಮದುವೆ ಮಾಡಿಸುತ್ತೇನೆಂದು ಮಹಾರಾಷ್ಟ್ರದ ಸಚಿವರೊಬ್ಬರು ಹೇಳಿಕೆ ನೀಡುತ್ತಾರೆ. ಈ ವ್ಯಕ್ತಿಗೆ ಜನಪ್ರತಿನಿಧಿಯಾಗುವುದಕ್ಕೆ ಕಿಂಚಿತ್ತಾದರು ಯೋಗ್ಯತೆ ಇದೆಯೆ ಎಂಬುದನ್ನು ನಾವೆಲ್ಲವರೂ ಪ್ರಶ್ನಿಸಬೇಕಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಕೇಂದ್ರ ಸಚಿವರೊಬ್ಬರು ರೈತರು ತಮ್ಮ ಹೊಲದಲ್ಲಿ ಉಳುಮೆ ಮಾಡುವಾಗ ಸಂಸ್ಕೃತ ಪಠಿಸಬೇಕೆಂದು ಹೇಳಿಕೆ ನೀಡಿದ್ದಾರೆ. ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಿಯೆಂದರೆ, ಸಚಿವರಿಂದ ಇಂತಹ ಪ್ರತಿಕ್ರಿಯೆ ಬರುತ್ತಿದೆ. ಇಂತಹ ಜನಪ್ರತಿನಿಧಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ಹೀಗಾಗಿ ಜನತೆ ಚುನಾವಣೆಗಳಲ್ಲಿ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಬೇಕೆಂದು ಅವರು ಹೇಳಿದರು.

ಜನಪ್ರತಿನಿಧಿಗಳ ಅಧ್ಯಯನ ಕೊರತೆಯಿಂದ ಸಮಾಜದಲ್ಲಿ ಅನೀತಿಗಳು ಪ್ರಾರಂಭಗೊಂಡಿವೆ. ರಾಜಕೀಯ ವ್ಯವಸ್ಥೆಯೊಂದು ಕೆಟ್ಟರೆ, ಇತರೆ ಕ್ಷೇತ್ರಗಳು ಹಿಂದುಳಿಯಲಿವೆ. ಹೀಗಾಗಿ ಜನಪ್ರತಿನಿಧಿಗಳು ಅತ್ಯಂತ ಜವಾಬ್ದಾರಿಯಿಂದ ತಮ್ಮ ಸ್ಥಾನವನ್ನು ಮುನ್ನಡೆಸಬೇಕೆಂದು ಅವರು ಹೇಳಿದರು.

ಹಿರಿಯ ಲೇಖಕ ಶೂದ್ರ ಶ್ರೀನಿವಾಸ್ ಮಾತನಾಡಿ, ಸಾಹಿತ್ಯ ಪ್ರಕಾರವು ತಮ್ಮ ಸುತ್ತಮುತ್ತ ವ್ಯಕ್ತಿಗಳನ್ನು ಹಾಗೂ ಪರಿಸರವನ್ನು ಮಾನವೀಯತೆಯಿಂದ ನೋಡುವ ಬಗೆಯನ್ನು ಕಲಿಸಿಕೊಡಲಿದೆ. ಹೀಗಾಗಿ ವಿಜ್ಞಾನಿ, ವೈದ್ಯರು ಸೇರಿದಂತೆ ಯಾವುದೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಾಹಿತ್ಯವು ಅಗತ್ಯವಿದೆ ಎಂದು ತಿಳಿಸಿದರು.

‘ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆ ಮಾಧ್ಯಮವನ್ನು ಜಾರಿ ಮಾಡುವ ಮೂಲಕ ಇತರೆ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗಲಿ. ವೈದ್ಯಕೀಯ, ಇಂಜಿನಿಯರ್ ಸೇರಿದಂತೆ ತಾಂತ್ರಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕಲಿಸುವಂತಾಗಬೇಕು’

-ಸಿದ್ದಲಿಂಗಯ್ಯ, ಹಿರಿಯ ಕವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News