ತುಳು ಭಾಷೆ 8ನೆ ಪರಿಚ್ಛೇದದಲ್ಲಿ ಸೇರಿಸಲು ಸಮ್ಮೇಳನ ಆಯೋಜನೆ: ಎ.ಸಿ.ಭಂಡಾರಿ

Update: 2018-09-09 15:44 GMT

ಬೆಂಗಳೂರು, ಸೆ. 9: ರಾಜ್ಯದಲ್ಲಿ ಶೀಘ್ರದಲ್ಲಿಯೇ ತುಳು ಸಮ್ಮೇಳವನ್ನು ಏರ್ಪಡಿಸಿ ತುಳು ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದದಲ್ಲಿ ಸೇರಿಸಲು ಒತ್ತಾಯಿಸಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದ್ದಾರೆ. 

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಆಯೋಜಿಸಿದ್ದ ತುಳುವೆರೆ ಚಾವಡಿಡ್ ತುಳುವೆರೆ ಪರ್ಬ, ತುಳುನಾಡು ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಒಂದೂವರೆ ಕೋಟಿ ಜನರು ತುಳು ಭಾಷಿಕರಿದ್ದು, ಈ ತುಳು ಭಾಷೆಯನ್ನು 8ನೆ ಪರಿಚ್ಛೇದದಲ್ಲಿ ಸೇರಿಸಲು ಒತ್ತಾಯಿಸಲಾಗುವುದು ಎಂದು ಹೇಳಿದರು.

ಮಂಗಳೂರು, ಉಡುಪಿ ಸೇರಿ ಇನ್ನಿತರ ಜಿಲ್ಲೆಗಳ ಕರಾವಳಿ ಪ್ರದೇಶದ 41 ಶಾಲೆಗಳಲ್ಲಿ 700 ವಿದ್ಯಾರ್ಥಿಗಳು ಈಗಾಗಲೇ ತುಳು ಭಾಷೆಯ ಒಂದು ವಿಷಯದಲ್ಲಿ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ. ಜೊತೆಗೆ ಪಿಯುಸಿ ಹಾಗೂ ಪದವಿ ಕೋರ್ಸ್‌ಗಳಲ್ಲೂ ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ತುಳು ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಕೃತಿಗಳನ್ನು ತುಳು ಭಾಷೆಗೆ ಅನುವಾದಿಸಲಾಗುವುದು. ಅದೇ ರೀತಿಯಾಗಿ ತುಳು ಭಾಷೆಯ ಕೃತಿಗಳನ್ನು ಇತರೆ ಭಾಷೆಗೆ ಅನುವಾದಿಸಲಾಗುವುದು. ಅಲ್ಲದೆ, ತುಳು ಸಂಸ್ಕೃತಿ ಹಾಗೂ ಭಾಷೆಯನ್ನು ಉಳಿಸಿ ಬೆಳೆಸಲು ತುಳು ಭವನ ಹಾಗೂ ತುಳು ಮ್ಯೂಸಿಯಂ ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಹಣ ಸಂಗ್ರಹಿಸಲಾಗುತ್ತಿದೆ. ಹೀಗಾಗಿ, ಸಂಘಟನೆಗಳು ಹಾಗೂ ರಾಜ್ಯ ಸರಕಾರ ಆರ್ಥಿಕ ಸಹಾಯ ಮಾಡಬೇಕಾಗಿದೆ ಎಂದು ಹೇಳಿದರು.

ಹೊಸದಿಲ್ಲಿಯ ಕರ್ನಾಟಕ ಸಂಘದ ಅಧ್ಯಕ್ಷ ವಸಂತಶೆಟ್ಟಿ ಬೆಳ್ಳಾರೆ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ತುಳು ಸಾಹಿತ್ಯ ಅಕಾಡಮಿ ಸ್ಥಾಪನೆಯಾಗಿದೆ. ಅದೇ ರೀತಿಯಾಗಿ ರಾಜ್ಯದಲ್ಲಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದಂತೆ ತುಳು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾಗಬೇಕು. ಹಾಗೂ ಆ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕ ಆಗುವ ಅವರಿಗೆ ಸಚಿವ ಸ್ಥಾನದ ಸ್ಥಾನಮಾನ ನೀಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯ ಕೆ.ವಿ.ರಾಜೇಂದ್ರಕುಮಾರ್, ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯಂತೆರ್ ನಿಟ್ಟೆ ಶಶಿಧರ್ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಕೆ.ಸೀತಾರಾಮ್ ಕುಲಾಲ್, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ತುಳುವೆರೆ ಜಾವಡಿ ಗೌರವ ಅಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ, ಹಿರಿಯ ತುಳು ಸಾಹಿತಿ ಎಂ.ಕೆ.ಸೀತರಾಮ ಕುಲಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News