ಜಾತಿ-ಧರ್ಮಕ್ಕೆ ತಲೆಬಾಗದವರು ನಿಜವಾದ ಸಾಹಿತಿ: ಎಚ್.ಎಸ್.ವೆಂಕಟೇಶಮೂರ್ತಿ

Update: 2018-09-09 15:53 GMT

ಬೆಂಗಳೂರು, ಸೆ.9: ಯಾವುದೇ ಜಾತಿ, ಧರ್ಮಕ್ಕೆ ತಲೆಬಾಗದೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರು ಹಾಗೂ ಜೀವನ ನಡೆಸುವವರು ನಿಜವಾದ ಸಾಹಿತಿಯಾಗುತ್ತಾರೆ ಎಂದು ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಿಸಿದ್ದಾರೆ. 

ರವಿವಾರ ಡಾ.ನರಹಳ್ಳಿ ಪ್ರತಿಷ್ಠಾನ ಹಾಗೂ ಕನ್ನಡ ಜನಶಕ್ತಿ ಕೇಂದ್ರದ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷ್ಮಂದಿರದಲ್ಲಿ ಆಯೋಜಿಸಿದ್ದ ಸಹ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅವರಿಗೆ ನರಹಳ್ಳಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಇಂದು ಹಲವು ಸಾಹಿತಿಗಳು ಯಾವುದೋ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚಿಗೆ ರಾಜಕೀಯ ವ್ಯಕ್ತಿಗಳು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಮತ ಪಡೆಯುವುದಕ್ಕಾಗಿ ತಮ್ಮ ಕುಲಬಾಂಧವರು ಹೆಚ್ಚಿರುವ ಕ್ಷೇತ್ರಕ್ಕೆ ಟಿಕೆಟ್ ಕೇಳುತ್ತಿದ್ದಾರೆ. ಇಂತಹ ಕೀಳು ಮಟ್ಟದ ರಾಜಕೀಯದ ಸಂದರ್ಭದಲ್ಲಿ ಸಾಹಿತಿಗಳು ವಾಸ್ತವವನ್ನು ಬರೆಯುವಂತಾಗಬೇಕು. ಯಾವುದೇ ಪಕ್ಷದ ಸಿದ್ಧಾಂತ ಅಥವಾ ಧರ್ಮದ ಪರವಾಗಿ, ಜಾತಿಗೆ ಸೀಮಿತವಾದವರ ರೀತಿಯಲ್ಲಿ ಸಾಹಿತ್ಯವನ್ನು ಬರೆಯಬಾರದು ಎಂದು ಸಲಹೆ ನೀಡಿದರು.

ಸಾಹಿತಿ ದಳವಾಯಿ ಇಂದಿನ ಯುವ ಲೇಖಕರ ಸಾಲಿನಲ್ಲಿ ನಿಲ್ಲುತ್ತಾರೆ. ಅಲ್ಲದೆ, ಅವರು ಪ್ರಗತಿಪರವಾಗಿ, ಮನುಷ್ಯತ್ವ ಪರವಾದ ಸಾಹಿತಿಯಾಗಿದ್ದಾರೆ. ಇಂತಹ ವ್ಯಕ್ತಿಗೆ ನರಹಳ್ಳಿ ಪ್ರತಿಷ್ಠಾನವು ಪ್ರಶಸ್ತಿ ನೀಡುತ್ತಿರುವುದು ಸಂತೋಷ ಸಂಗತಿಯಾಗಿದೆ. ದಳವಾಯಿ ಅವರಲ್ಲಿರುವ ವಿನಯತೆ, ಗುರುವಿನ ಮೇಲಿನ ಪ್ರೀತಿ-ವಾತ್ಸಲ್ಯ, ಜವಾಬ್ದಾರಿ ಬೇರೆ ಲೇಖಕರಿಗೂ ಸ್ಫೂರ್ತಿಯಾಗಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಮಲ್ಲಿಕಾ ಎಸ್. ಘಂಟಿ ಮಾತನಾಡಿ, ದಳವಾಯಿ ನನ್ನ ಬಳಿ ಪಿಎಚ್‌ಡಿ ಮಾಡಿದ ವಿದ್ಯಾರ್ಥಿ. ಇಂದು ಗುರುವನ್ನೇ ಮೀರಿಸುವ ಮಟ್ಟಿಗೆ ಶಿಷ್ಯ ಬೆಳೆದಿರುವುದು ಖುಷಿಯ ವಿಚಾರ. ದಳವಾಯಿಯಲ್ಲಿರುವ ತಾಳ್ಮೆ, ನಿಶ್ಕಲ್ಮಶ ಪ್ರೇಮ ಮೆಚ್ಚಲೇ ಬೇಕು. ಪ್ರಶಸ್ತಿ ಪಡೆದು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ವೆಂಕಟಗಿರಿ ದಳವಾಯಿ, ಡಾ.ಮಲ್ಲಿಕಾ ಘಂಟಿಯು ನನ್ನ ತಂದೆ ಸ್ಥಾನದಲ್ಲಿ ನಿಂತು ನನ್ನ ಜೀವನವನ್ನೇ ಬದಲಾಯಿಸಿದ್ದಾರೆ. ಮೊದಲು ನಾನು ರಾಜಕೀಯ ಮುಖಂಡರ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದೆ. ಅನಂತರ ಬೇಸತ್ತು ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದೇನೆ. ಇದಕ್ಕೆಲ್ಲಾ ಕಾರಣ ಮಲ್ಲಿಕಾ ಘಂಟಿ ಅವರು. ಅವರ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ. ನನಗೆ ಸಿಕ್ಕಿರುವ ಈ ಪ್ರಶಸ್ತಿ ಜವಾಬ್ದಾರಿ ಇನ್ನಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಜನಶಕ್ತಿ ಕೇಂದ್ರ ಅಧ್ಯಕ್ಷ ಸಿ.ಕೆ.ರಾಮೇಗೌಡ, ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News