ಮುಝಫ್ಫರ್‌ನಗರ ಗಲಭೆ: 7 ಅತ್ಯಾಚಾರ ಪ್ರಕರಣಗಳಲ್ಲಿ ಒಬ್ಬನ ಬಂಧನವೂ ಆಗಿಲ್ಲ; ಆ್ಯಮ್ನೆಸ್ಟಿ

Update: 2018-09-09 16:36 GMT

ಹೊಸದಿಲ್ಲಿ, ಸೆ.9: 2013ರ ಮುಝಫ್ಫರ್‌ನಗರ ಕೋಮು ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಮತ್ತು ಅವರ ಪುನರ್ವಸತಿ ವಿಷಯದಲ್ಲಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ಆ್ಯಮ್ನೆಸ್ಟಿ ಆರೋಪಿಸಿದೆ.

ಕನಿಷ್ಟ 60 ಮಂದಿಯನ್ನು ಬಲಿಪಡೆದ ಮತ್ತು 50,000ಕ್ಕೂ ಅಧಿಕ ಜನರನ್ನು ನಿರಾಶ್ರಿತರನ್ನಾಗಿಸಿದ ಮುಝಫ್ಫರ್‌ನಗರ ಕೋಮು ಹಿಂಸಾಚಾರ ಘಟನೆ ನಡೆದು ಐದು ವರ್ಷಗಳೇ ಕಳೆದಿವೆ. ಆದರೆ ಘಟನೆಯ ವೇಳೆ ನಡೆದ ಏಳು ಅತ್ಯಾಚಾರ ಪ್ರಕರಣಗಳ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಮತ್ತು ರಾಜ್ಯ ಸರಕಾರ ವಿಫಲವಾಗಿದೆ ಮತ್ತು ನಿರಾಶ್ರಿತರು ಇನ್ನೂ ಪುನರ್‌ವಸತಿಗಾಗಿ ಕಾಯುತ್ತಿದ್ದಾರೆ ಎಂದು ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ದೂರಿದೆ.

ಮುಝಫ್ಫರ್‌ನಗರ ಮತ್ತು ಶಮ್ಲಿಯಲ್ಲಿ ನಡೆದ ದಂಗೆಯ ಸಂತ್ರಸ್ತರನ್ನು ಉತ್ತರ ಪ್ರದೇಶ ಸರಕಾರ ಸಂಪೂರ್ಣವಾಗಿ ಮರೆತಿದೆ. ಅವರು ಅನುಭವಿಸಿದ ಅನ್ಯಾಯವನ್ನು ಸರಿಪಡಿಸಲು ಸರಕಾರ ಕನಿಷ್ಟ ಕ್ರಮವನ್ನೂ ಕೈಗೊಂಡಿಲ್ಲ. ಸಂತ್ರಸ್ತರ ಪುನರ್‌ವಸತಿ ಮತ್ತು ಪರಿಹಾರಕ್ಕಾಗಿ ಸರಕಾರ ತೆಗೆದುಕೊಂಡಿರುವ ಏನೇನೂ ಸಾಲದು ಎಂದು ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ಭಾರತದ ಕಾರ್ಯಕ್ರಮ ನಿರ್ದೇಶಕಿ ಅಸ್ಮಿತಾ ಬಸು ದೂರಿದ್ದಾರೆ.

ಸದ್ಯ ಸಂತ್ರಸ್ತರು ನ್ಯಾಯ ಸಿಗುವ ಭರವಸೆಯನ್ನು ಕಳೆದುಕೊಂಡಿದ್ದಾರೆ. ಏಳು ಅತ್ಯಾಚಾರ ಪ್ರಕರಣಗಳಲ್ಲಿ ಒಂದರಲ್ಲೂ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ. 2016ರಲ್ಲಿ ಹೆರಿಗೆಯ ಸಮಯದಲ್ಲಿ ಓರ್ವ ಅತ್ಯಾಚಾರ ಸಂತ್ರಸ್ತೆ ಮೃತಪಟ್ಟಿದ್ದಾರೆ ಎಂದು ಬಸು ತಿಳಿಸಿದ್ದಾರೆ. ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಿರುವ ಬಹುತೇಕ ಕುಟುಂಬಗಳು ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು ಮತ್ತು ಚರಂಡಿ ವ್ಯವಸ್ಥೆಯನ್ನೂ ಹೊಂದಿಲ್ಲ. ಈ ಸಂತ್ರಸ್ತರು ಬಡತನ ಮತ್ತು ಅಸಮಾನತೆಯ ಸುಳಿಗೆ ಸಿಲುಕುವಂತಾಗಿದೆ ಎಂದು ಬಸು ವಿಷಾದ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News