ರಫೇಲ್ ಊಹೆಗೂ ನಿಲುಕದ ಪ್ರಮಾಣದ ಹಗರಣ: ಪ್ರಶಾಂತ್ ಭೂಷಣ್

Update: 2018-09-09 16:08 GMT

ಅಹ್ಮದಾಬಾದ್, ಸೆ. 9: ರಫೇಲ್ ಯುದ್ಧ ವಿಮಾನ ಒಪ್ಪಂದ ‘‘ಊಹಾತೀತ ಪ್ರಮಾಣದ ಹಗರಣ’’ ಎಂದು ಶನಿವಾರ ವ್ಯಾಖ್ಯಾನಿಸಿರುವ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್, ಈ ಆಮದು ಒಪ್ಪಂದದಿಂದ ಅನಿಲ್ ಅಂಬಾನಿ ಅವರ ರಿಲಯನ್ಸ್ ಸಮೂಹ 21,000 ಕೋ. ರೂ. ಕಮಿಷನ್ ಪಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

ಅವರು ಇದನ್ನು 1980ರ ಬೋಫರ್ಸ್‌ ಒಪ್ಪಂದದ ಲಂಚಕ್ಕೆ ಹೋಲಿಸಿದ್ದಾರೆ. ಅನಿಲ್ ಅಂಬಾನಿ ಅವರು ಮೊದಲು ಈ ಹಿಂದೆ ಆರೋಪವನ್ನು ನಿರಾಕರಿಸಿದ್ದರು. ಬಿಜೆಪಿ ನೇತೃತ್ವದ ಸರಕಾರ ಈ ಒಪ್ಪಂದದಲ್ಲಿ ಅನಿಲ್ ಅಂಬಾನಿ ಕಂಪೆನಿಗೆ ಅನುಕೂಲ ಮಾಡಿ ಕೊಡುವ ಒಂದೇ ಉದ್ದೇಶದಿಂದ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡು ಭಾರತೀಯ ವಾಯು ಪಡೆಯನ್ನು ನಿರ್ಲಕ್ಷಿಸಿದೆ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.

 ರಫೇಲ್ ಒಪ್ಪಂದ ಊಹಾತೀತ ಪ್ರಮಾಣದ ಹಗರಣ. ಬೋಫರ್ಸ್‌ ಹಗರಣದಲ್ಲಿ 64 ಕೋ. ರೂ. ಲಂಚ ಪಡೆದುಕೊಳ್ಳಲಾಗಿತ್ತು. ಆದರೆ, ರಫೇಲ್ ಹಗರಣದಲ್ಲಿ ಶೇ. 30 ಕಮಿಷನ್ ನೀಡಲಾಗಿದೆ. ಅನಿಲ್ ಅಂಬಾನಿ ಅವರು ಕೇವಲ ಕಮಿಷನ್ ಆಗಿ 21,000 ಕೋ. ರೂ. ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

 ್ಜಕಳೆದ ತಿಂಗಳು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅನಿಲ್ ಅಂಬಾನಿ ಬರೆದ ಪತ್ರದ ಹೇಳಿಕೆ ಉಲ್ಲೇಖಿಸಿರುವ ರಿಲಾಯನ್ಸ್ ಸಮೂಹ, ‘‘ರಿಲಾಯನ್ಸ್ ಸಾವಿರಾರು ಕೋಟಿ ರೂ. ಲಾಭ ಮಾಡಿಕೊಂಡಿದೆ ಎಂಬ ಆರೋಪ ಸ್ವ ಹಿತಾಸಕ್ತಿ ಹೊಂದಿದವರ ಕಲ್ಪನೆಯಿಂದ ಮೂಡಿ ಬಂದಿರುವುದು’’ ಎಂದಿದ್ದಾರೆ.

ಒಪ್ಪಂದದಲ್ಲಿರುವ ಗೌಪ್ಯ ಷರತ್ತುಗಳನ್ನು ಕೇಂದ್ರ ಮರೆ ಮಾಚುತ್ತಿದೆ ಎಂದು ಆರೋಪಿಸಿರುವ ಪ್ರಶಾಂತ್ ಭೂಷಣ್, ಪ್ರತಿಪಕ್ಷದ ಆಗ್ರಹದಂತೆ ಜಂಟಿ ಸಂಸದೀಯ ಸಮಿತಿ ಈ ಒಪ್ಪಂದದ ಬಗ್ಗೆ ತನಿಖೆ ನಡೆಸಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News