ಬಿಟ್‌ಕಾಯ್ನ್ ವಸೂಲಿ ಪ್ರಕರಣ: ತಲೆಮರೆಸಿಕೊಂಡಿದ್ದ ಮಾಜಿ ಬಿಜೆಪಿ ಶಾಸಕ ಸೆರೆ

Update: 2018-09-09 16:14 GMT

ಅಹ್ಮದಾಬಾದ್,ಸೆ.9: ಬಿಟ್‌ಕಾಯ್ನ್ ವಸೂಲಿ ಪ್ರಕರಣದಲ್ಲಿ ಆರೋಪಿಯಾಗಿರುವ ಗುಜರಾತಿನ ಅಮ್ರೇಲಿ ಜಿಲ್ಲೆಯ ಧಾರಿ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ನಳಿನ್ ಕೋಟಡಿಯಾ ಅವರನ್ನು ರವಿವಾರ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯ ಅಮಲ್ನೇರ್‌ನಲ್ಲಿ ಬಂಧಿಸಲಾಗಿದೆ.

ಗುಜರಾತ್‌ನ ಸ್ಥಳೀಯ ನ್ಯಾಯಾಲಯವು ಕಳೆದ ಮೇ ತಿಂಗಳಲ್ಲಿ ಅವರ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಬಳಿಕ ಜೂನ್ 18ರಂದು ಅವರನ್ನು ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸಿತ್ತು. ಕೆಲವು ಪೊಲೀಸ್ ಅಧಿಕಾರಿಗಳು ಸೂರತ್‌ನ ಬಿಲ್ಡರ್ ಶೈಲೇಶ ಭಟ್ ಅವರಿಂದ ಬಲವಂತದಿಂದ ಬಿಟ್‌ಕಾಯ್ನ್ ಗಳನ್ನು ವಶಪಡಿಸಿಕೊಂಡಿದ್ದಕ್ಕೆ ಈ ಪ್ರಕರಣವು ಸಂಬಂಧಿಸಿದ್ದು,ಅಮ್ರೇಲಿಯ ಮಾಜಿ ಎಸ್‌ಪಿ ಜಗದೀಶ ಪಟೇಲ್ ಸೇರಿದಂತೆ ಒಂದು ಡಝನ್‌ಗೂ ಅಧಿಕ ಪೊಲೀಸ್ ಅಧಿಕಾರಿಗಳನ್ನು ಈ ವರೆಗೆ ಬಂಧಿಸಲಾಗಿದೆ.

ಅಮ್ರೇಲಿ ಪೊಲೀಸರು ಈ ವರ್ಷದ ಫೆ.9ರಂದು ತನ್ನನ್ನು ಮತ್ತು ತನ್ನ ವ್ಯವಹಾರ ಪಾಲುದಾರ ಕಿರೀಟ್ ಪಲಡಿಯಾರನ್ನು ಗಾಂಧಿನಗರದಿಂದ ಅಪಹರಿಸಿ,ಪಲಡಿಯಾರಿಂದ ಒಂಭತ್ತು ಕೋಟಿ ರೂ.ಮೌಲ್ಯದ ಬಿಟ್‌ಕಾಯ್ನಗಳನ್ನು ಆರೋಪಿಗಳರ್ಲ್ಲೋವನ ಹೆಸರಿಗೆ ಬಲವಂತದಿಂದ ವರ್ಗಾಯಿಸಿಕೊಂಡಿದ್ದರು ಎಂದು ದೂರುದಾರ ಭಟ್ ಆರೋಪಿಸಿದ್ದರು. ಕೋಟಡಿಯಾ ಈ ಸಂಚಿನಲ್ಲಿ ಭಾಗಿಯಾಗಿದ್ದರು ಎಂದೂ ಅವರು ಆಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News