ಪೊಲೀಸ್ ದೋಷಾರೋಪಣೆ ಪಟ್ಟಿಯನ್ನು ಪ್ರಶ್ನಿಸಲಿರುವ ಗೋರಕ್ಷಕರು: ಬಿಜೆಪಿ ಶಾಸಕ

Update: 2018-09-09 16:33 GMT

ಆಲ್ವಾರ್(ರಾಜಸ್ಥಾನ),ಸೆ.9: ಅಕ್ರಮ ಗೋಸಾಗಾಣಿಕೆಯಲ್ಲಿ ಅಕ್ಬರ್ ಖಾನ್ ಎಂಬವರನ್ನು ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ ಶುಕ್ರವಾರ ಪೊಲೀಸರು ನ್ಯಾಯಾಲಯದಲ್ಲಿ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯು ವಿವಾದವನ್ನು ಸೃಷ್ಟಿಸಿದೆ. ದನಗಳ ಕಳ್ಳಸಾಗಣೆದಾರರು ಮತ್ತು ಕರ್ತವ್ಯ ಲೋಪದ ಆರೋಪವನ್ನು ಹೊತ್ತಿದ್ದ ಪೊಲೀಸರ ಬಗ್ಗೆ ಚಕಾರವೆತ್ತದ ದೋಷಾರೋಪಣೆ ಪಟ್ಟಿಯನ್ನು ಗೋರಕ್ಷಕರು ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ ಎಂದು ಸ್ಥಳೀಯ ರಾಮಗಡ ಬಿಜೆಪಿ ಶಾಸಕ ಜ್ಞಾನದೇವ ಅಹುಜಾ ಹೇಳಿದ್ದಾರೆ.

ಜು.20ರ ರಾತ್ರಿ ರಾಮಘಡದ ಲಾಲವಂಡಿ ಗ್ರಾಮದಲ್ಲಿ ಅಕ್ರಮ ದನ ಸಾಗಾಣಿಕೆಯ ಶಂಕೆಯಲ್ಲಿ ಗುಂಪಿನಿಂದ ಥಳಿಸಲ್ಪಟ್ಟಿದ್ದ ಅಕ್ಬರ್ ಖಾನ್ ಬಳಿಕ ಸಾವನ್ನಪ್ಪಿದ್ದರು. ಖಾನ್ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವಂತಿದೆ ಎಂದು ರಾಜಸ್ಥಾನದ ಗೃಹಸಚಿವ ಗುಲಾಬಚಂದ್ ಕಟಾರಿಯಾ ನಂತರ ಹೇಳಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ಖಾನ್‌ರನ್ನು ಪೊಲೀಸ್ ಠಾಣೆಗೆ ಒಯ್ಯಲಾಗಿತ್ತು ಮತ್ತು ಘಟನೆ ನಡೆದ ಮೂರು ಗಂಟೆಗಳ ಬಳಿಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

ಜು.24ರಂದು ಆಲ್ವಾರ್ ನ್ಯಾಯಾಲಯವು ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.

ದೋಷಾರೋಪಣೆ ಪಟ್ಟಿಯಲ್ಲಿ ಅಕ್ರಮ ಗೋ ಸಾಗಾಣಿಕೆದಾರರು ಮತ್ತು ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಗಳ ಬಗ್ಗೆ ಉಲ್ಲೇಖಿಸಲಾಗಿಲ್ಲ, ಹೀಗಾಗಿ ಅದು ಏಕಪಕ್ಷೀಯವಾಗಿದೆ ಎಂದು ಅಹುಜಾ ರವಿವಾರ ಆರೋಪಿಸಿದರು.

ಈ ದೋಷಾರೊಪಣೆ ಪಟ್ಟಿಯು ಅಮಾಯಕ ಗೋರಕ್ಷಕರಿಗೆ ಅನ್ಯಾಯವಾಗಿದೆ. ಪೊಲೀಸರಿಗೆ ಮಾಹಿತಿ ನೀಡಿ ಗೋ ಕಳ್ಳಸಾಗಾಣಿಕೆದಾರರ ಬಂಧನವಾಗುವಂತೆ ಮಾಡಿದ್ದು ಅವರ ಏಕಮೇವ ತಪ್ಪಾಗಿತ್ತು ಎಂದರು.

ದೋಷಾರೋಪಣ ಪಟ್ಟಿಯಲ್ಲಿ ಮೂವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News