ಸಿದ್ದಲಿಂಗಯ್ಯ, ಶೂದ್ರ ಶ್ರೀನಿವಾಸ್ ಸಾಂಸ್ಕೃತಿಕ ಚಳವಳಿಯ ಕೊಂಡಿಗಳು: ಕೇಂದ್ರ ವಿವಿ ಕುಲಪತಿ ಜಾಫೆಟ್

Update: 2018-09-09 16:59 GMT

ಬೆಂಗಳೂರು, ಸೆ.9: ಹಿರಿಯ ಕವಿ ಸಿದ್ದಲಿಂಗಯ್ಯ ಹಾಗೂ ಲೇಖಕ ಶೂದ್ರ ಶ್ರೀನಿವಾಸ್ 70ರ ದಶಕದಲ್ಲಿ ಸಾಂಸ್ಕೃತಿಕ ಚಳವಳಿಯ ಬಹುಮುಖ್ಯ ಭಾಗವಾಗಿದ್ದರು ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಜಾಫೆಟ್ ಅಭಿಪ್ರಾಯಿಸಿದರು.

ರವಿವಾರ ಅಂಕಿತ ಪ್ರಕಾಶನ ನಗರದ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಕವಿ ಸಿದ್ದಲಿಂಗಯ್ಯರವರ ಊರುಕೇರಿ-3 ಹಾಗೂ ಶೂದ್ರ ಶ್ರೀನಿವಾಸ್‌ರವರ ಯಾತ್ರೆ ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಲೋಕವನ್ನು ವಿಸ್ತರಿಸಿದ ಕಿ.ರಂ.ನಾಗರಾಜ್, ಡಿ.ಆರ್.ನಾಗರಾಜ್, ಲಂಕೇಶ್, ಸಿದ್ದಲಿಂಗಯ್ಯ, ಶೂದ್ರ ಶ್ರೀನಿವಾಸ್ ನನ್ನ ಬದುಕಿನ ಭಾಗವಾಗಿದ್ದಾರೆ. ಅವರನ್ನು ಹೊರತು ಪಡಿಸಿ ನನ್ನ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರೊಂದಿಗೆ ಒಡನಾಡಿದಾಗ, ಚರ್ಚೆಸಿದ ವಿಷಯಗಳು, ರೂಪಿಸಿದ ಚಳವಳಿಯಿಂದಾಗಿ ನನ್ನ ಚಿಂತನೆಗಳು ವಿಸ್ತಾರಗಳಗೊಳ್ಳಲು ಸಹಾಯಕವಾಗಿವೆ ಎಂದು ಅವರು ಬಣ್ಣಿಸಿದರು.

ಕವಿ ಸಿದ್ದಲಿಂಗಯ್ಯರವರ ಆತ್ಮಕತನ ಊರುಕೇರಿ ಕೃತಿಯು ಸಮುದಾಯದ ಆತ್ಮಚರಿತ್ರೆಯು ಹೌದಾಗಿದೆ. ಅವರು ರೈತ, ಕಾರ್ಮಿಕರ ಹಾಗೂ ದಲಿತ ಚಳವಳಿಗಾಗಿ ರಚಿಸಿದ ಹಾಡುಗಳು ಪ್ರತಿಯೊಬ್ಬ ಹೋರಾಟಗಾರನ ಹಾಡಾಗಿತ್ತು. ಅವರ ಹಾಸ್ಯಪ್ರೇರಿತ ಬರಹಗಳ ಹಿಂದೆ ಗಂಭೀರವಾದ ಚಿಂತನೆಗಳು ಅಡಗಿದ್ದವು ಎಂದು ಅವರು ತಿಳಿಸಿದರು.

ಇನ್ನು ಶೂದ್ರ ಶ್ರೀನಿವಾಸ್‌ರವರ ಶೂದ್ರ ಪತ್ರಿಕೆಯು ನಾಡಿನ ಸಾಹಿತ್ಯ, ಸಾಂಸ್ಕೃತಿಕ ಲೋಕದ ಅಸ್ಮಿತೆಯಾಗಿದೆ. ಸಾಹಿತ್ಯ-ಪತ್ರಿಕೋದ್ಯಮ, ಚಳವಳಿಗಳ ನಡುವಳಿಗೆ ದೋಣಿಯ ರೀತಿಯಲ್ಲಿ ಸಂಪರ್ಕ ಕಲ್ಪಿಸುತ್ತಿದ್ದವರು. ಒಟ್ಟಾರೆ ಸಿದ್ದಲಿಂಗಯ್ಯ ಹಾಗೂ ಶೂದ್ರ ಶ್ರೀನಿವಾಸ್ 70ರ ದಶಕದಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸೃಜನಾತ್ಮಕ ತಾರೆಗಳೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ವಿಮರ್ಶಕ ಎಸ್.ಆರ್.ವಿಜಯ್‌ಶಂಕರ್ ಮಾತನಾಡಿ, ಶೋಷಿತ ವರ್ಗ ತನ್ನ ಹಸಿವು, ಅವಮಾನಗಳನ್ನು ಧ್ವೇಷವಾಗಿ ಪರಿವರ್ತಿಸಿಕೊಳ್ಳುವ ಬದಲಿಗೆ ಹಾಸ್ಯವಾಗಿಸಿಕೊಳ್ಳುತ್ತಾರೆ. ಅಂತಹ ಹಾಸ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಗಂಭೀರವಾದ, ಉತ್ಕೃಷ್ಟವಾದ ಕೃತಿಗಳನ್ನು ನೀಡಿದವರು ಕವಿ ಸಿದ್ದಲಿಂಗಯ್ಯನವರು ಎಂದು ತಿಳಿಸಿದರು.

ಕವಿ ಸಿದ್ದಲಿಂಗಯ್ಯರವರ ಕೃತಿಗಳಲ್ಲಿ ಹಾಸ್ಯಲೇಪಿತ ಗಂಭೀರ ವಿಷಯಗಳ ಕುರಿತು ಪುನರ್ ವಿಮರ್ಶಿಸುವ ಕೆಲಸ ಮಾಡಬೇಕಿದೆ. ಹಾಗೆಯೆ ವಿಧಾನಪರಿಷತ್ ಸದಸ್ಯರಾಗಿ ಅವರು ನಿರ್ವಹಿಸಿದ ಕಾರ್ಯಚಟುವಟಿಕೆಗಳ ಕುರಿತು ಅಧ್ಯಯನ ಮಾಡಬೇಕಿದೆ ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ನಾವು ದೇಶವನ್ನು ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರನಂತರದ ಕಾಲಘಟ್ಟವೆಂದು ಮಾತ್ರ ವಿಭಜಿಸಿ ನೋಡುತ್ತೇವೆ. ಅದಕ್ಕಿಂತ ಮುಖ್ಯವಾಗಿರುವ ಜಾಗತೀಕರಣಕ್ಕೂ ಪೂರ್ವ ಹಾಗೂ ಜಾಗತೀಕರಣದ ನಂತರವೆಂದು ವಿಭಜನೆಗೊಂಡಿರುವುದನ್ನು ನಾವು ಕಾಣಬೇಕಾಗಿದೆ. ಅವು ಸಮಾಜಕ್ಕೆ ಒಡ್ಡಿರುವ ಸವಾಲುಗಳನ್ನು ಅರಿಯಬೇಕಾಗಿದೆ ಎಂದು ತಿಳಿಸಿದರು.

ದೇಶದಲ್ಲಿ 70-80ರ ದಶಕದ ಬರಹಗಾರರಿಗೆ ಹಾಗೂ ಚಳವಳಿಗಾರರಿಗೆ ತಾವು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದೇವೆಯೆಂದು ಸ್ಪಷ್ಟತೆಯಿತ್ತು. ಹಾಗೂ ಅವರು ಕಣ್ಣೆದುರಿಗೆ ಇದ್ದರು. ಆದರೆ, ಜಾಗತೀಕರಣದ ಪರಿಣಾಮಗಳು ನಮ್ಮ ಭಾಷೆ, ಸಂಸ್ಕೃತಿ, ಆಲೋಚನಾ ಕ್ರಮ ಹಾಗೂ ಜ್ಞಾನವನ್ನು ನಾಶ ಮಾಡುತ್ತಿದ್ದರೂ ವಿರೋಧಿಸಲು ಸಾಧ್ಯವಾಗದ ರೀತಿಯಲ್ಲಿ ನಮ್ಮ ಸಮಾಜ ಪರಿವರ್ತನೆಗೊಂಡಿದೆ. ಇದಕ್ಕೆ ಮೂಲ ಕಾರಣ ಹಾಗೂ ಈ ಸಮಸ್ಯೆಯಿಂದ ಬಿಡುಗಡೆಗೊಳ್ಳುವ ದಾರಿಯನ್ನು ಹುಡುಕಬೇಕಿದೆ ಎಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಕವಿ ಸಿದ್ದಲಿಂಗಯ್ಯ, ಶೂದ್ರ ಶ್ರೀನಿವಾಸ್, ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್, ಅಂಕಿತಾ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News