ಗ್ರಾಹಕರನ್ನು ಪ್ರಜ್ಞಾವಂತರನ್ನಾಗಿಸಿ: ಡಿ.ಎಸ್.ವೀರಯ್ಯ

Update: 2018-09-09 17:01 GMT

ಬೆಂಗಳೂರು, ಸೆ. 9: ಗ್ರಾಹಕರನ್ನು ಪ್ರಜ್ಞಾವಂತರನ್ನಾಗಿ ಮಾಡುವ ಮೂಲಕ ಅವರನ್ನು ಜಾಗೃತಗೊಳಿಸುವುದು ಅವಶ್ಯಕವಾಗಿದೆ ಎಂದು ವಿಧಾನ ಪರಿಷತ್ತು ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಹೇಳಿದ್ದಾರೆ.

ರವಿವಾರ ನಗರದ ಕಬ್ಬನ್‌ಪಾರ್ಕ್‌ನ ಸೆಂಚುರಿ ಕ್ಲಬ್‌ನಲ್ಲಿ ರಾಜ್ಯ ಗ್ರಾಹಕ ಹಕ್ಕುಗಳ ಸಂಘದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿಯೊಂದಿಗೆ ಗ್ರಾಹಕರ ಮೂಲಭೂತ ಹಕ್ಕುಗಳ ಬಗೆ ಅರಿವು ಮೂಡಿಸಿ, ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಸಂಸ್ಥೆಯು ನಿಸ್ವಾರ್ಥದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯನ್ನು ಬಲಪಡಿಸುವ ಮೂಲಕ ಗ್ರಾಹಕರ ಮೇಲೆ ಆಗುತ್ತಿರುವ ಬಂಡವಾಳ ಶಾಹಿಗಳ ಪ್ರಭಾವದ ಶೋಷಣೆಯನ್ನು ತಡೆಯಬೇಕು. ಶೋಷಣೆಯೆಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ, ಶೋಷಣೆ ಇಲ್ಲದ ಕ್ಷೇತ್ರವೇ ಇಲ್ಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವ್ಯಾಪಾರದಲ್ಲಿ ಗ್ರಾಹಕರೆ ರಾಜ ಎನ್ನುತ್ತಾರೆ. ಆದರೆ, ಪ್ರತಿ ಹಂತದಲ್ಲೂ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಕಂಪೆನಿಗಳ ಹೆಸರಿನಲ್ಲಿ ಸ್ವಲ್ಪ (ಉದಾ: ಬಾಟಾ ಸಿಂಬಲ್ ಬದಲಿಗೆ ಬಟ್ ಎಂದು ಇರುತ್ತೆ) ಬದಲಾವಣೆ ಮಾಡಿಕೊಂಡು ಮೋಸ ಮಾಡುತ್ತಿರುವ ಜಾಲ ಅಧಿಕವಾಗಿದೆ. ಅಲ್ಲದೆ, ತಾಳ್ಮೆಯಿಂದ ಕಂಪೆನಿಯ ಹೆಸರನ್ನು ನೋಡುವ ವ್ಯವಧಾನವೂ ಗ್ರಾಹಕರಲ್ಲಿ ಇರುವುದಿಲ್ಲ ಎಂದರು.

ಮೋಸ ಜಾಲಗಳು ಮೊದಲು ಆಯ್ಕೆ ಮಾಡಿಕೊಳ್ಳುವುದೇ ಮಧ್ಯಮ ವರ್ಗವನ್ನು, ಚಿಟ್ ಫಂಡ್ ಮೂಲಕ ನಿಮ್ಮದೆ ಹಣ ತೆಗೆದುಕೊಂಡು ಬಂಡವಾಳ ಹೂಡಿಕೆ ಮಾಡುತ್ತಾರೆ. ಕೆಲವೊಮ್ಮೆ ಹಣವನ್ನು ಹಿಂತಿರುಗಿಸುವುದಿಲ್ಲ, ಇವಕ್ಕೆಲ್ಲ ಕಠಿಣ ಕಾನೂನಿನ ಅಗತ್ಯವಿದೆ ಎಂದು ಹೇಳಿದರು. ಆನ್‌ಲೈನ್‌ನಲ್ಲಿ ಆಕರ್ಷವಾಗಿ ಜಾಹೀರಾತು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಕೆಲಸ ನಡೆಯುತ್ತಿದೆ. ಅಲ್ಲಿನ ವಸ್ತುಗಳು ಹಾಗೂ ಆಹಾರ ಪದಾರ್ಥಗಳು ಗುಣಮಟ್ಟದಿಂದ ಕೂಡಿರುವುದು ಬಹುತೇಕ ವಿರಳ. ಇಂತಹ ಕಳಪೆ ಗುಣ್ಣಮಟ್ಟದ ವಸ್ತುಗಳನ್ನು ನೀಡುತ್ತಿರುವ ಕಂಪೆನಿಗಳ ವಿರುದ್ಧ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದರು.

ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ ಮಾತನಾಡಿ, ಜಾಗತೀಕರಣ ಹಾಗೂ ಜಾಹೀರಾತಿಗಳ ಪ್ರಭಾವದಿಂದಾಗಿ ಗ್ರಾಹಕರಲ್ಲಿ ಅನೇಕ ಗೊಂದಲಗಳಿದ್ದು, ಗ್ರಾಹಕ ವೇದಿಕೆಗಳು ಸರಿಯಾದ ರೀತಿಯಲ್ಲಿ ಸಲಹೆ ನೀಡಬೇಕು. ಇನ್ನೂ ಆಹಾರ ಪದಾರ್ಥಗಳ ಕಲಬೆರಕೆ ಗಮನಿಸಿದಾಗ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳಲು ಭಯವಾಗುತ್ತೆ ಎಂದರು.

ಸಮಾರಂಭದಲ್ಲಿ ವಿಧಾನ ಪರಿಷತ್ತು ಸದಸ್ಯ ಎ.ದೇವೇಗೌಡ, ಅಖಿಲ ಭಾರತ ಗ್ರಾಹಕ ಹಕ್ಕು ಸಂಸ್ಥೆ ಉಪಾಧ್ಯಕ್ಷೆ ಉಷಾ ದಾನಿ, ಜಿಲ್ಲಾ ಗ್ರಾಹಕ ವೇದಿಕೆ ಅಧ್ಯಕ್ಷೆ ಶೋಭಾ ದೇವಿ ಸೇರಿದಂತೆ ಪ್ರಮುಖರು ಉಪಸ್ಥಿತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News