ಶಿಕ್ಷಣ ಸಂಸ್ಥೆಗಳು ರಾಷ್ಟ್ರದ ಜೀವಂತ ನಿಧಿ: ಪಿ.ಬಿ.ಮಹಿಷಿ

Update: 2018-09-09 17:14 GMT

ಬೆಂಗಳೂರು, ಸೆ.9: ಒಂದು ರಾಷ್ಟ್ರದ ಭವ್ಯ ಭವಿಷ್ಯ ನಿರ್ಧಾರವಾಗುವುದು ಶಾಲಾ ತರಗತಿಗಳ ಕೊಠಡಿಗಳಲ್ಲಿ, ಮಕ್ಕಳನ್ನು ತ್ತಮ ನಾಗರೀಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ.ಬಿ.ಮಹರ್ಷಿ ಅಭಿಪ್ರಾಯಪಟ್ಟರು.

ರವಿವಾರ ಗಾಂಧಿನಗರದ ಭಾರತೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರದ ಜೀವಂತ ನಿಧಿಯಾದ ಮಾನವ ಸಂಪನ್ಮೂಲದೊಂದಿಗೆ ವ್ಯವಹರಿಸುವ ಶಿಕ್ಷಣ ಸಂಸ್ಥೆಗಳು ಖಂಡಿತವಾಗಿಯೂ ಬಹುಮುಖ್ಯವಾದ ಉತ್ಪಾದಕ ವಲಯ ಎಂದರು.

ಸುಸಂಸ್ಕೃತ ಸಮಾಜದಲ್ಲಿ ಗುರುಗಿಂತ ಮೇಲಾದವರು ಯಾರು ಇಲ್ಲ. ಗುರು ಮತ್ತು ಗುರಿಯಿಲ್ಲದೆ ಬದುಕಿನಲ್ಲಿ ಏನ್ನನ್ನು ಸಾಧಿಸಲು ಆಗುವುದಿಲ್ಲ ಎಂದರು.

ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಸ್.ಟಿ.ರಮೇಶ್ ಮಾತನಾಡಿ, ಗಾಂಧಿನಗರದ ಪ್ರೌಢಶಾಲೆಯಲ್ಲಿ ಉತ್ತಮ ಗುರುಗಳಿದ್ದರು. ಹೀಗಾಗಿ ಕಲಿಕೆಗೂ ಸಹಕಾರಿಯಾಗಿತ್ತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಶಾಲೆಯ ಮೊದಲ ವಿದ್ಯಾರ್ಥಿ ಡಿ. ಗಂಗಾಧರ ಶಾಸ್ತ್ರಿ ಮಾತನಾಡಿ, ತಮ್ಮ ಶಾಲಾ ದಿನಗಳನ್ನು ಹಾಗೂ ಆಗಿನ ಕಾಲದಲ್ಲಿ ಇದ್ದ ಗುರು ಶಿಷ್ಯರ ಸಂಬಂಧವನ್ನು ಮೆಲುಕು ಹಾಕಿದರು. ಶಾಲೆಯ ಹಳೆ ವಿದ್ಯಾರ್ಥಿ ಸಂಪತ್ತೂರು ವಿಶ್ವನಾಥ್, ಗಾಂಧಿನಗರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, ತಮಗೆ ಹೆಮ್ಮೆಯ ಸಂಗತಿ. ಗುರುಗಳನ್ನು ನಾವು ದೇವರ ಸಮಾನರಾಗಿ ಕಾಣುತ್ತಿದ್ದೆವು ಎಂದರು. ಹಳೆಯ ವಿದ್ಯಾರ್ಥಿ ಡಾ.ಕೆ. ಎಸ್. ಅಶೋಕ್, ಮುಖ್ಯೋಪಾಧ್ಯಾಯರಾದ ಹೇಮಲತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News