ಆರ್‌ಟಿಐ ಕಾರ್ಯಕರ್ತನ ಹತ್ಯೆ: ಸಿಬಿಐ ತನಿಖೆಗೆ ಕುಟುಂಬ ಆಗ್ರಹ

Update: 2018-09-09 17:52 GMT

ಶಿಮ್ಲಾ, ಸೆ. 9: ಸಿರ್ವೌರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಮಾಹಿತಿ ಹಕ್ಕು ಕಾರ್ಯಕರ್ತ ಕೇದಾರ್ ಸಿಂಗ್ ಜಿಂದಾನ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಜಿಂದಾನ್ ಕುಟುಂಬ ಆಗ್ರಹಿಸಿದೆ.

ಹತ್ಯೆಯಾದ ಮಾಹಿತಿ ಹಕ್ಕು ಕಾರ್ಯಕರ್ತನ ಕುಟುಂಬಿಕರ ಸಹಿತ ಸಾಮಾಜಿಕ ಹೋರಾಟಗಾರರು ಹಾಗೂ ಸ್ಥಳೀಯರು ಶಿಮ್ಲಾದಲ್ಲಿ ಶನಿವಾರ ರಾತ್ರಿಯಿಂದ ರವಿವಾರ ಮುಂಜಾನೆ ವರೆಗೆ ಜಿಂದಾನ್ ಅವರ ಮೃತದೇಹವನ್ನು ಇರಿಸಿ ಪ್ರತಿಭಟನೆ ನಡೆಸಿದರು. ಜಿಂದಾನ್ ಅವರ ಕುಟುಂಬಕ್ಕೆ ರಕ್ಷಣೆ ನೀಡುವಂತೆ, ಅವರ ಪತ್ನಿಗೆ ಉದ್ಯೋಗ ನೀಡುವಂತೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಐವರು ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.

ಶುಕ್ರವಾರ ಹತ್ಯೆಯಾದ ಜಿಂದಾನ್ ಅವರ ಮೃತದೇಹವನ್ನು ಕುಟುಂಬದ ವಿನಂತಿ ಮೇರೆಗೆ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸಿರ್ವೌರ್‌ನಿಂದ ಶಿಮ್ಲಾಕ್ಕೆ ತರಲಾಗಿತ್ತು. ಜಿಂದಾನ್ ಅವರನ್ನು ಸಿರ್ವೌರ್ ಜಿಲ್ಲೆಯ ಬಕ್ರಾಸ್ ಗ್ರಾಮದ ಸಮೀಪ ಹತ್ಯೆಗೈಯಲಾಗಿತ್ತು ಹಾಗೂ ಅನಂತರ ಅವರ ಮೃತದೇಹವನ್ನು ವಾಹನ ಹರಿಸಿ ಛಿದ್ರಗೊಳಿಸಲಾಗಿತ್ತು. ಜಿಂದಾನ್ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆಸುವಂತೆ ಹಾಗೂ ಪ್ರಕರಣವನ್ನು ಶಿರ್ಮಾಕ್ಕೆ ವರ್ಗಾಯಿಸುವಂತೆ ಜಿಂದಾನ್ ಅವರ ಕುಟುಂಬದ ಸದಸ್ಯರು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News