ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸಕ್ರಿಯ ರಾಜಕೀಯಕ್ಕೆ

Update: 2018-09-10 06:22 GMT

ಪಾಟ್ನಾ,ಸೆ.10: ಆರು ವರ್ಷಗಳಿಂದ ಚುನಾವಣಾ ತಂತ್ರಗಾರಿಕೆ ಮೂಲಕ ಗಮನ ಸೆಳೆದಿರುವ ಪ್ರಶಾಂತ್ ಕಿಶೋರ್ ಇದೀಗ ಸಕ್ರಿಯ ರಾಜಕಾರಣಕ್ಕೆ ಧುಮುಕಲಿದ್ದಾರೆ. ಆರಂಭದಲ್ಲಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ, ಬಳಿಕ ನಿತೀಶ್ ಕುಮಾರ್ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್‍ಗೆ ಚುನಾವಣಾ ತಂತ್ರಗಾರಿಕೆ ರೂಪಿಸಿದ್ದ ಇವರು ಇದೀಗ 'ತಳಮಟ್ಟದ ರಾಜಕೀಯಕ್ಕೆ' ಪ್ರವೇಶಿಸುವುದಾಗಿ ಪ್ರಕಟಿಸಿದ್ದಾರೆ.

ಹೈದರಾಬಾದ್‍ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‍ನಲ್ಲಿ ರವಿವಾರ ವಿದ್ಯಾರ್ಥಿಗಳ ಜತೆ ನಡೆಸಿದ ಸಂವಾದದ ವೇಲೆ ಪ್ರಶಾಂತ್ ಈ ವಿಷಯ ಪ್ರಕಟಿಸಿದ್ದಾರೆ. ಆದರೆ ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಬಹಿರಂಗಪಡಿಸಿಲ್ಲ. ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರಿಗೆ ನಿಕಟವಾಗಿರುವ ಪ್ರಶಾಂತ್ ಕಿಶೋರ್, ಅದೇ ಪಕ್ಷದಿಂದ ಕಣಕ್ಕೆ ಇಳಿಯುವ ನಿರೀಕ್ಷೆ ಇದೆ. 2015ರಲ್ಲಿ ಬಿಹಾರದ ಮಹಾಮೈತ್ರಿಯ ಪ್ರಚಾರ ರೂಪುರೇಷೆಗಳನ್ನು ರಚಿಸಿದ್ದ ಪ್ರಶಾಂತ್ ಕಿಶೋರ್, ಮಹಾಘಟಬಂಧನದಿಂದ ಜೆಡಿಯು ಕಳಚಿಕೊಂಡ ಬಳಿಕ ಕೂಡಾ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಣದಲ್ಲೇ ಉಳಿದುಕೊಂಡಿದ್ದಾರೆ.

2012ರಿಂದ ಗುಜರಾತ್ ಮುಖ್ಯಮಂತ್ರಿ ಮೋದಿಯವರಿಗೆ ಸಲಹೆ ನೀಡುವ ಮೂಲಕ ರಾಜಕೀಯ ತಂತ್ರಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡ ಇವರು, 2014ರ ಮೋದಿ ಚುನಾವಣಾ ಪ್ರಚಾರತಂತ್ರ ರೂಪಿಸಿ ದೇಶದ ಗಮನ ಸೆಳೆದಿದ್ದರು.  ರಾಜಕೀಯ ವರ್ತುಲದಲ್ಲಿ ನಿತೀಶ್ ಕುಮಾರ್ ಅವರ ಚಾಣಕ್ಯ ಎಂದೇ ಪ್ರಶಾಂತ್ ಕಿಶೋರ್ ಕರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News