ಅತಿವೃಷ್ಟಿ: ಕರ್ನಾಟಕಕ್ಕೆ ಶೀಘ್ರವೇ ಕೇಂದ್ರ ತಂಡ ಕಳುಹಿಸಲು ಪ್ರಧಾನಿ ಸಮ್ಮತಿ

Update: 2018-09-10 07:29 GMT

ಹೊಸದಿಲ್ಲಿ, ಸೆ.10: ಕೊಡಗು ಮತ್ತು ನೆರೆಯ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯ ಸಮೀಕ್ಷೆ ಮಾಡಲು ಕೇಂದ್ರ ಸರ್ಕಾರವು ಕೂಡಲೇ ಅಧಿಕಾರಿಗಳ ಎರಡು ತಂಡಗಳನ್ನು ಕಳುಹಿಸಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ನಿಯೋಗವು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತಿವೃಷ್ಟಿ ಹಾಗೂ ಒಳನಾಡಿನಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಬಗ್ಗೆ ಮನವರಿಕೆ ಮಾಡಿತು. ಕೊಡಗು ಹಾಗೂ ನೆರೆಯ ಜಿಲ್ಲೆಗಳಿಗೆ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗಾಗಿ  2,000 ಕೋಟಿ ರೂ. ಗಳ ಪ್ಯಾಕೇಜ್ ಘೋಷಿಸಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಇದಕ್ಕೆ ಪ್ರಧಾನ ಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಕೊಡಗು ಮತ್ತು ನೆರೆಯ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಸತತ ಭಾರಿ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಉಂಟಾಗಿ ಜನ-ಜಾನುವಾರುಗಳು  ಜೀವ ಕಳೆದುಕೊಂಡಿದ್ದು, ಸಾವಿರಾರು ಜನ  ನಿರಾಶ್ರಿತರಾಗಿದ್ದಾರೆ.  ಆಗಸ್ಟ್ 2ನೇ  ವಾರದಲ್ಲಿ ಕಳೆದ 118 ವರ್ಷಗಳಲ್ಲೇ ದಾಖಲೆ ಮಳೆ ಸುರಿದಿದ್ದರಿಂದ ಅಪಾರ ನಷ್ಟ ಸಂಭವಿಸಿದೆ. ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳಿಗೆ, ಮೂಲ ಸೌಕರ್ಯ, ಮನೆಗಳಿಗೆ ತೀವ್ರ ಹಾನಿಯುಂಟಾಗಿದೆ. ಅತಿವೃಷ್ಟಿಯಿಂದಾಗಿ ಈ ಜಿಲ್ಲೆಗಳಲ್ಲಿ ಒಟ್ಟು 3,705.87 ಕೋಟಿ  ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪುನರ್ವಸತಿ ಮತ್ತು ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೊಡಗು ಮತ್ತಿತರ ಜಿಲ್ಲೆಗಳಿಗೆ 2,000 ರೂಪಾಯಿಗಳ ಪ್ಯಾಕೇಜ್ ಘೋಷಿಸಿ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ನಿಯೋಗದ ಇತರ ಸದಸ್ಯರೊಂದಿಗೆ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಗಿದೆ.

ಅಂತೆಯೇ ಕರ್ನಾಟಕದ ಒಳನಾಡಿನಲ್ಲಿ 17 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಈ ಕುರಿತೂ ಸಹ ನಷ್ಟದ ಪ್ರಮಾಣ ಅಂದಾಜು ಮಾಡಲಾಗುತ್ತಿದ್ದು, ಈ ಕುರಿತು ಮಂಗಳವಾರ ಸಂಪುಟ ಉಪಸಮಿತಿ ಸಭೆ ನಡೆಸಿ ಪ್ರಸ್ತಾವವನ್ನು ಅಂತಿಮಗೊಳಿಸಲಿದೆ. ಅದರಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ನಿಯೋಗವು ಪ್ರಧಾನಿಯವರಿಗೆ ಮಾಹಿತಿ ನೀಡಿತು.

ಮಾಜಿ ಪ್ರಧಾನಿ ಹಾಗೂ ಹಾಸನ ಸಂಸದ ಎಚ್.ಡಿ.ದೇವೇಗೌಡ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್,  ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮುಖ್ಯಮಂತ್ರಿಯೊಂದಿಗೆ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News