ಭಾರತ ಸರಕಾರ ನನ್ನನ್ನು ಬಲಿಪಶು ಮಾಡಿದೆ : ಮೆಹುಲ್ ಚೊಕ್ಸಿ

Update: 2018-09-10 07:44 GMT

ಹೊಸದಿಲ್ಲಿ,ಸೆ.10 : ಆರ್ಥಿಕ ಅಪರಾಧ ನಡೆಸಿ ಇಂಗ್ಲೆಂಡಿನಿಂದ ಗಡೀಪಾರಾದವರನ್ನು ಹಿಡಿಯಲು ಸಾಧ್ಯವಾಗದ ಭಾರತ ಸರಕಾರವು ತನ್ನನ್ನು ಸಾಫ್ಟ್ ಟಾರ್ಗೆಟ್ ಮಾಡಿದೆ ಹಾಗೂ ತಾನು ರಾಜಕೀಯ ದೌರ್ಜನ್ಯದ ಬಲಿಪಶುವಾಗಿದ್ದೇನೆ ಎಂದು ಪಿಎನ್‍ಬಿ ವಂಚನೆ ಪ್ರಕರಣದಲ್ಲಿ ಬೇಕಾಗಿ ದೇಶ ಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೊಕ್ಸಿ ಹೇಳಿಕೊಂಡಿದ್ದಾರೆ.

ಆರೋಪಗಳು ಕೇಳಿ ಬಂದ ನಂತರ ಪ್ರಥಮ ಮಾಧ್ಯಮ ಸಂದರ್ಶನ ನೀಡಿದ ಅಂಟಿಗುವಾ ಮತ್ತು ಬರ್ಬುಡಾದಲ್ಲಿರುವ ಚೊಕ್ಸಿ ತಾವೀಗ ಇರುವ ಹೊಸ ದೇಶದ ಸರಕಾರ ತನ್ನ ನಾಗರಿಕನನ್ನು ತನ್ನ ನೆಲದ ಕಾನೂನಿನಂತೆ ರಕ್ಷಿಸುವುದು ಎಂಬ ವಿಶ್ವಾಸ ತಮಗಿರುವುದಾಗಿ ತಿಳಿಸಿದರು.

ಪ್ರಕರಣದ ಬಗ್ಗೆ ಮಾತನಾಡಿದ ಅವರು, "ಏನೇ ಪ್ರಮಾದವಾಗಿದ್ದರೂ ಅದಕ್ಕೆ ಬ್ಯಾಂಕ್ ಕಾರಣವಾಗಿದೆ ಆದರೆ ನನ್ನನ್ನು ಬಲಿಪಶು ಮಾಡಲಾಗಿದೆ'' ಎಂದರು.

ತಮ್ಮ ಕಾನೂನು ತಂಡದ ಸಹಾಯದಿಂದ ಫೋನ್ ಮೂಲಕ ಹಾಗೂ ಲಿಖಿತ ಉತ್ತರಗಳ ಮೂಲಕ ಸಂದರ್ಶನ ನೀಡಿದ ಅವರು ವಂಚನೆಯ ಬಗ್ಗೆ ಕೇಳಿದಾಗ "ಇಂತಹ ವಿಚಾರಗಳನ್ನು ನೋಡಿಕೊಳ್ಳಲು ನನ್ನ ಕಂಪೆನಿಯಲ್ಲಿ ಬೇರೆ ಅಧಿಕಾರಿಗಳಿದ್ದುದರಿಂದ ತನಗೆ ನಿಖರ ಮಾಹಿತಿಯಿಲ್ಲ, ಆದರೆ ನಾವು ಎರಡು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜತೆ ಸಂಬಂಧ ಹೊಂದಿದ್ದೇವೆ,'' ಎಂದರು.

ಬ್ಯಾಂಕಿಗೆ ಸಲ್ಲಬೇಕಾಗಿರುವ ಬಾಕಿಯನ್ನು ಮರುಪಾವತಿಸಲು ಈಗಲೂ ಆಸಕ್ತರಾಗಿದ್ದೀರಾ ಎಂಬ ಪ್ರಶ್ನೆಗೆ "ನನ್ನ ಬ್ರ್ಯಾಂಡ್ ವ್ಯಾಲ್ಯೂ ಈಗ ಸೊನ್ನೆಯಾಗಿದೆ. ನನ್ನಲ್ಲಿರುವುದನ್ನೆಲ್ಲಾ ವಶಪಡಿಸಿಕೊಳ್ಳಲಾಗಿದೆ. ನನ್ನ ಆಸ್ತಿಗಳನ್ನು ಮಾರಾಟ  ಮಾಡಿ ಹಣ ನೀಡಬೇಕಾದವರಿಗೆ ಅವರು ನೀಡಲಿ. ಎಲ್ಲಾ ಆಸ್ತಿಗಳನ್ನೂ ಜಾರಿ ನಿರ್ದೇಶನಾಲಯ ವಶ ಪಡಿಸಿಕೊಂಡಿರುವುದರಿಂದ ನಾನು ಹಣ ಹಿಂದಿರುಗಿಸುವ ಸ್ಥಿತಿಯಲ್ಲಿಲ್ಲ,'' ಎಂದರು.

ಆಂಟಿಗುವಾದ ಪೌರತ್ವ ಏಕೆ ಪಡೆದಿದ್ದೀರಿ ಎಂಬ ಪ್ರಶ್ನೆಗೆ ತಮ್ಮ ಉದ್ಯಮ ವಿಸ್ತರಿಸಲು ಹೀಗೆ ಮಾಡಿದ್ದಾಗಿ ಹಾಗೂ ವಿವಿಧ ತನಿಖಾ ಏಜನ್ಸಿಗಳ ಕ್ರಮದಿಂದಾಗಿ ತನ್ನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಚೊಕ್ಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News