ವಂಝಾರ, ಐದು ಮಂದಿ ಇತರರ ವಿರುದ್ಧದ ಆರೋಪ ಕೈಬಿಟ್ಟ ಸಿಬಿಐ ಕೋರ್ಟ್ ಆದೇಶ ಎತ್ತಿ ಹಿಡಿದ ಬಾಂಬೆ ಹೈಕೋರ್ಟ್

Update: 2018-09-10 09:14 GMT

ಮುಂಬೈ,ಸೆ.10 : ಸೊಹ್ರಾಬುದ್ದೀನ್ ಶೇಖ್, ಆತನ ಪತ್ನಿ ಕೌಸರ್ ಬೀ ಹಾಗೂ ಅವರ ಸಹವರ್ತಿ ತುಲಸೀರಾಂ ಪ್ರಜಾಪತಿ ಎನ್‍ಕೌಂಟರ್ ಪ್ರಕರಣಗಳಲ್ಲಿ ಗುಜರಾತ್ ರಾಜ್ಯದ ಅಂದಿನ ಡಿಐಜಿ ಡಿ ಜಿ ವಂಝಾರ, ಐಪಿಎಸ್ ಅಧಿಕಾರಿಗಳಾದ ದಿನೇಶ್ ಎಂ ಎನ್ ಹಾಗೂ ರಾಜಕುಮಾರ್ ಪಾಂಡ್ಯನ್  ಸಹಿತ ಆರು ಮಂದಿ ಪೊಲೀಸರ ವಿರುದ್ಧದ ಆರೋಪಗಳನ್ನು ಕೈಬಿಟ್ಟ ಸಿಬಿಐ ನ್ಯಾಯಾಲಯದ ಕ್ರಮವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ.

ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಗುಜರಾತ್ ಐಪಿಎಸ್ ಅಧಿಕಾರಿ ವಿಪುಲ್ ಅಗರ್ವಾಲ್ ಅವರು ಕೂಡ ಸಲ್ಲಿಸಿರುವ ಅಪೀಲನ್ನು  ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದೆ.

ವಂಝಾರ, ದಿನೇಶ್ ಹಾಗೂ ಪಾಂಡಿಯನ್ ಅವರ ವಿರುದ್ಧದ ಆರೋಪಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸೊಹ್ರಾಬುದ್ದೀನ್ ಶೇಖ್ ಸೋದರ ರುಬಾಬುದ್ದೀನ್ ಮೂರು ಅಪೀಲುಗಳನ್ನು ಸಲ್ಲಿಸಿದ್ದರು.  ರಾಜಸ್ಥಾನ ಪೊಲೀಸ್ ಕಾನ್‍ಸ್ಟೇಬಲ್ ದಲ್ಪತ್ ಸಿಂಗ್ ರಾಥೋಡ್ ಹಾಗೂ ಗುಜರಾತ್ ಪೊಲೀಸ್ ಅಧಿಕಾರಿ ಎನ್ ಕೆ ಅಮೀನ್ ಅವರ  ವಿರುದ್ಧದ ಆರೋಪಗಳನ್ನು  ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಿಬಿಐ ಅಪೀಲು ಸಲ್ಲಿಸಿದ್ದರೆ ಇನ್ನೊಂದು ಅಪೀಲು ವಿಪುಲ್ ಅಗರ್ವಾಲ್ ಅವರದ್ದಾಗಿತ್ತು. ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಟ್ಟಿರುವುದನ್ನು ರದ್ದುಗೊಳಿಸಿದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಅವರು ಪ್ರಶ್ನಿಸಿದ್ದರು.

ಜುಲೈ 4ರಿಂದ ಈ ಆರು ಅಪೀಲುಗಳ ಮೇಲಿನ ವಿಚಾರಣೆಯನ್ನು ನ್ಯಾಯಮೂರ್ತಿ ಎ ಎಂ ಬದರ್ ಆರಂಭಿಸಿ ಆಗಸ್ಟ್ ತಿಂಗಳಿಗೆ ತೀರ್ಪನ್ನು ಕಾದಿರಿಸಿದ್ದರು.

ಪ್ರಕರಣದಲ್ಲಿ ಹಲವಾರು  ಮಂದಿ ಸಾಕ್ಷಿಗಳು ತಿರುಗಿ ಬಿದ್ದಿರುವುದನ್ನು ವಿಚಾರಣೆ ವೇಳೆ ಜಸ್ಟಿಸ್ ಬದರ್ ಗಂಭೀರವಾಗಿ ಪರಿಗಣಿಸಿದರಲ್ಲದೆ ಪ್ರತಿವಾದಿಗಳು ಇದರ ಪ್ರಯೋಜನ ಪಡೆಯುವುದನ್ನು ತಡೆಯುವುದಾಗಿ ಹೇಳಿದ್ದರು.

ತನಿಖೆ ಯಾವ ಹಂತಕ್ಕೆ ಬಂದಿದೆ ಹಾಗೂ ಸಾಕ್ಷಿಗಳ ಬಗ್ಗೆ ವಿಚಾರಣೆಯುದ್ದಕ್ಕೂ ಜಸ್ಟಿಸ್ ಬದರ್ ಸಿಬಿಐಯನ್ನು ಪ್ರಶ್ನಿಸುತ್ತಲೇ ಇದ್ದರು. ವಂಝಾರ, ಪಾಂಡಿಯನ್ ಹಾಗೂ ದಿನೇಶ್ ವಿರುದ್ಧದ ಆರೋಪ ಕೈಬಿಡುವುದಕ್ಕೆ ತನ್ನ ಆಕ್ಷೇಪವಿಲ್ಲ ಎಂದು ಸಿಬಿಐ ನ್ಯಾಯಾಲಯದ ಮುಂದೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News