ನನಗೆ ಯಾವ ಬಂಧನ ಭೀತಿಯೂ ಇಲ್ಲ: ಸಚಿವ ಡಿ.ಕೆ.ಶಿವಕುಮಾರ್

Update: 2018-09-10 11:42 GMT

ಹೊಸದಿಲ್ಲಿ/ಬೆಂಗಳೂರು, ಸೆ. 10: 'ನನಗೆ ದಿಲ್ಲಿಯಲ್ಲಿ ಮೂರು ಮನೆಗಳು ಇವೆ. ಎಲ್ಲಿ ಬೇಕಾದರೂ ಉಳಿದುಕೊಳ್ಳುತ್ತೇನೆ, ನಾನೆಲ್ಲೂ ನಾಪತ್ತೆಯಾಗಿಲ್ಲ. ನನಗೆ ಯಾವುದೇ ಬಂಧನದ ಭೀತಿಯೂ ಇಲ್ಲ' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಹೊಸದಿಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಕುಮಾರ್, 'ಯಾರು ಯಾರನ್ನೂ ತಡೆಯಲು ಸಾಧ್ಯವಾಗುವುದಿಲ್ಲ. ಕಾನೂನಿನ ಮೂಲಕ ಏನು ಬೇಕಾದರೂ ಮಾಡಲಿ, ಎಲ್ಲವನ್ನು ಎದುರಿಸಲು ಸಿದ್ದನಾಗಿದ್ದೇನೆ' ಎಂದರು.

'ನಾನು ಮೂವತ್ತನೆ ವಯಸ್ಸಿಗೆ ಮಾಜಿ ಮಂತ್ರಿಯಾಗಿದ್ದೆ. ಎಷ್ಟೋ ವರ್ಷ ಮಾಜಿಯಾಗಿಯೇ ಇದ್ದೇ. ಯಾವ ಎಫ್‌ಐಆರ್ ಬೇಕಾದರೂ ಹಾಕಿಕೊಳ್ಳಲಿ. ಏನು ಬೇಕಾದರೂ ತನಿಖೆ ಮಾಡಿಕೊಳ್ಳಲಿ. ಇಡಿ-ಐಟಿ ಅಧಿಕಾರಿಗಳು ನನ್ನನ್ನಂತೂ ಗೌರವಯುತವಾಗಿ ನಡೆಸಿಕೊಂಡಿದ್ದಾರೆ' ಎಂದು ಶಿವಕುಮಾರ್ ತಿಳಿಸಿದರು.

ನಾನು ಯಾವುದೇ 'ಮನಿ ಲಾಂಡ್ರಿಂಗ್' ಮಾಡಿಲ್ಲ. ಯಾವ್ಯಾವ ರಾಜಕಾರಣಿಗಳ ಪ್ರಕರಣಗಳು ಏನಾಗಿವೆ ಅಂತ ನನಗೂ ಗೊತ್ತಿದೆ. ಯಾವುದೇ ಕಾರಣಕ್ಕೂ ಹೆದರುವ ಪ್ರಮೇಯವೇ ಇಲ್ಲ. 90 ಮಂದಿ ನನ್ನಿಂದಾಗಿ ಕಾನೂನು ತೊಂದರೆ ಮತ್ತು ಮುಜುಗರ ಅನುಭವಿಸುತ್ತಿದ್ದಾರೆ. ನಾನು ಹಳೆಯ ರೋಗಿ, ವೈದ್ಯರಿಗಿಂತ ನುರಿತ. ಹೀಗಾಗಿ ವಕೀಲರನ್ನು ಸಂಪರ್ಕಿಸುವ ಅಗತ್ಯ ಇಲ್ಲ. ಹೊಸದಿಲ್ಲಿಯಲ್ಲಿ ನಾನು ಯಾವುದೇ ವಕೀಲರನ್ನು ಭೇಟಿಯಾಗಿಲ್ಲ. ಬಿಜೆಪಿಯಲ್ಲಿ ನನಗೆ ಬಹಳ ಜನ ಸ್ನೇಹಿತರಾಗಿದ್ದಾರೆ. ನಾನು ಯಾವುದೇ ತನಿಖೆ ಎದುರಿಸಲು ಸಿದ್ದ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ದಿಲ್ಲಿಯಲ್ಲಿ ಪತ್ತೆಯಾಗಿದ್ದ ಅಕ್ರಮ ಸಂಪತ್ತು ಪ್ರಕರಣ ಸಂಬಂಧ ಸಚಿವ ಡಿ.ಕೆ. ಶಿವಕುಮಾರ್ ಮೇಲೆ ಜಾರಿ ನಿರ್ದೇಶನಾಲಯದಿಂದ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದ್ದು, ಅವರನ್ನು ಬಂಧಿಸುವ ಸಾಧ್ಯತೆಗಳಿವೆ ಎಂಬ ಸುದ್ದಿ ಹಬ್ಬಿತ್ತು. ಆ ಹಿನ್ನೆಲೆಯಲ್ಲಿ ರವಿವಾರ ಡಿ.ಕೆ.ಶಿವಕಮಾರ್ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News