ತೈಲ ಬೆಲೆ ಏರಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಂದ ಜನತೆಯ ದಾರಿ ತಪ್ಪಿಸುವ ಯತ್ನ: ಬಿಎಸ್‌ವೈ

Update: 2018-09-10 13:28 GMT

ಬೆಂಗಳೂರು, ಸೆ.10: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಮುಳುಗುತ್ತಿರುವ ಕಾಂಗ್ರೆಸ್ ಹಡಗನ್ನು ರಕ್ಷಿಸಲು ಕಾಂಗ್ರೆಸ್ ನಾಯಕರು ನಿರಂತರವಾಗಿ ಅರ್ಧ ಸತ್ಯವನ್ನು ಹೇಳುವ ಮೂಲಕ ಎಂದಿನಂತೆ ಜನಸಾಮಾನ್ಯರನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇಂದಿನ ಭಾರತ್ ಬಂದ್ ಈ ಪ್ರಯತ್ನದ ಮತ್ತೊಂದು ಭಾಗವಷ್ಟೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಬಂದ್ ಆಚರಿಸುವುದು ತಪ್ಪಲ್ಲ. ಆದರೆ, ಆಡಳಿತದಲ್ಲಿರುವ ಪಕ್ಷಗಳೇ ಬಂದ್‌ಗೆ ಬೆಂಬಲವಾಗಿ ನಿಲ್ಲಬಾರದು. ಇದು ಸರ್ವೋಚ್ಛ ನ್ಯಾಯಾಲಯದ ಆದೇಶ ಉಲ್ಲಂಘಿಸಿದಂತೆ. ತೈಲ ಬೆಲೆ ಏರಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ನಿಗದಿಯಾಗುತ್ತದೆ. ಯುಪಿಎ ಸರಕಾರ ಇದ್ದಾಗಲೇ ತೈಲ ಬೆಲೆಗಳ ಮೇಲಿನ ಸರಕಾರದ ನಿಯಂತ್ರಣವನ್ನು ತೆಗೆದು ಹಾಕಲಾಗಿದೆ. ಈ ಅಂಶವನ್ನು ಕಾಂಗ್ರೆಸ್ ಮುಖಂಡರು ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಂದ ಮುಚ್ಚಿಡುವ ಕುತಂತ್ರ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕಳೆದ 14 ತಿಂಗಳಲ್ಲಿ ತೈಲದ ಬೆಲೆ ಶೇ.73ರಷ್ಟು ಏರಿಕೆ ಕಂಡರೂ, ಭಾರತದಲ್ಲಿ ತೈಲದ ಬೆಲೆ ಕೇವಲ ಶೇ.29.58ರಷ್ಟು ಏರಿಕೆಯಾಗಿದೆ. ಬ್ಯಾರೆಲ್‌ಗೆ 28 ಡಾಲರ್ ಇದ್ದ ಬೆಲೆ ಇಂದು 79 ಡಾಲರ್ ಆಗಿದೆ. ಈ ಬೆಲೆಗೆ ಅನುಗುಣವಾಗಿ ತೈಲ ಬೆಲೆ ಏರಿಕೆ ಆಗುತ್ತದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಾ ದೇಶವು ತೈಲ ರಾಷ್ಟ್ರಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ ಮತ್ತು ಹೆಚ್ಚಿನ ತೈಲವನ್ನು ಮಾರಾಟ ಮಾಡದಂತೆ ನಿರ್ಬಂಧ ಹೇರಿದೆ ಎಂದು ಅವರು ಹೇಳಿದ್ದಾರೆ.

ಪ್ರತಿ ಲೀಟರ್ ಪೆಟ್ರೋಲ್‌ನಿಂದ ಕೇಂದ್ರ ಸರಕಾರಕ್ಕೆ 6.66 ರೂ.ದೊರೆಯಲಿದ್ದು, ರಾಜ್ಯ ಸರಕಾರಕ್ಕೆ 25 ರೂ.ದೊರೆಯಲಿದೆ. ಪರಿಸ್ಥಿತಿ ಹೀಗಿರುವಾಗ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ? ತೆರಿಗೆ ಇಳಿಕೆ ಮಾಡುವುದು ರಾಜ್ಯ ಸರಕಾರದ ಕರ್ತವ್ಯವಲ್ಲವೇ ? ಕಾಂಗ್ರೆಸ್ ಈ ಎಲ್ಲ ಸತ್ಯಗಳನ್ನು ಮರೆ ಮಾಚುತ್ತಿದೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನರೇಂದ್ರಮೋದಿ ಆಡಳಿತದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸದೃಢವಾಗಿರುವುದರಿಂದ ಧಾನ್ಯಗಳ ಮತ್ತು ಗೃಹ ಬಳಕೆ ವಸ್ತುಗಳ ಬೆಲೆ ನಿಯಂತ್ರಣದಲ್ಲಿದೆ. ಕಾಂಗ್ರೆಸ್ ಸರಕಾರ ಇದ್ದಾಗ ಬೇಳೆ ಕಾಳುಗಳು ಮತ್ತು ಇತರೆ ಧಾನ್ಯಗಳ ಬೆಲೆ ಗಗನಕ್ಕೇರಿ ಬಡವರಿಗೆ ತೊಂದರೆಯಾಗಿತ್ತು ಎಂದು ಅವರು ಹೇಳಿದ್ದಾರೆ.

ಆದರೆ, ಮೋದಿ ಸರಕಾರ ಬೆಳೆಗಳಿಗೆ ಅತ್ಯಧಿಕ ಬೆಲೆ ಘೋಷಿಸಿ ಒಂದು ಕಡೆ ರೈತರು ಹಾನಿಗೊಳಗಾಗದಂತೆ ನೋಡಿಕೊಂಡಿದೆ. ಇನ್ನೊಂದು ಕಡೆ ಗ್ರಾಹಕರ ಹಿತಾಸಕ್ತಿ ಕಾಪಾಡಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತೈಲೋತ್ಪನ್ನ ರಾಷ್ಟ್ರಗಳ ಪರಿಸ್ಥಿತಿ ಸುಧಾರಿಸಿದಾಗ ದೇಶದಲ್ಲಿ ತೈಲ ಬೆಲೆಗಳು ಕಡಿಮೆ ಆಗುವುದರಲ್ಲಿ ಸಂದೇಹವಿಲ್ಲ ಎಂದು ಯಡಿಯೂರಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News