ಪ್ರಧಾನಿ ಮೋದಿಯದ್ದು ಹಿಟ್ಲರ್ ಮಾದರಿ ಆಡಳಿತ: ದಿನೇಶ್ ಗುಂಡೂರಾವ್

Update: 2018-09-10 13:34 GMT

ಬೆಂಗಳೂರು, ಸೆ.10: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ಹಿಟ್ಲರ್ ಆಡಳಿತ ಮಾಡುತ್ತಿದ್ದು, ನಾನೇ ಸರಿ ಎಂದು ವಾದಿಸುತ್ತಿದ್ದಾರೆ. ಯಾರ ಸಲಹೆ, ಸೂಚನೆಗಳನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿಯು ತಮ್ಮ ಆಡಳಿತದ ಸಂದರ್ಭದಲ್ಲಿ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ದೇಶದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದೆ ಹೊರತು, ಕಡಿಮೆಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏಕಪಕ್ಷೀಯವಾಗಿ ನೋಟು ಅಮಾನ್ಯೀಕರಣ ತೀರ್ಮಾನ ಕೈಗೊಂಡು ಸಂಕಷ್ಟ ತಂದಿಟ್ಟರು. ಈಗ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆಯನ್ನು ಪ್ರತಿ ದಿನ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತೈಲ ಬೆಲೆ ಹೆಚ್ಚಳ ಮಾಡುವವರನ್ನು ನೇಣಿಗೆ ಹಾಕಿ ಎಂದು ಗುಡುಗಿದ್ದರು. ಆದರೆ, ಈಗ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

ಪೆಟ್ರೋಲ್, ಡಿಸೇಲ್ ದರ ಏರಿಕೆ ಅಲ್ಲದೆ, ದವಸ ಧಾನ್ಯ, ತರಕಾರಿ, ಪ್ರಯಾಣ ದರ ಕೂಡ ಏರಿಕೆಯಾಗುತ್ತವೆ. ಅಚ್ಚೇ ದಿನ್ ಬರುತ್ತದೆ ಎಂದು ಹೇಳಿದ್ದರು. ಅವರ ಪ್ರಕಾರ ನಿಜವಾದ ಒಳ್ಳೆ ದಿನಗಳು ಎಂದರೆ ಬೆಲೆ ಏರಿಕೆ ಮಾಡಿ ಜನರ ಮೇಲೆ ಬರೆ ಎಳೆಯುವುದಾ ಎಂದು ಪ್ರಶ್ನಿಸಿದ ಅವರು, ಜನಸಾಮಾನ್ಯರ ಕಷ್ಟಗಳನ್ನು ಕೇಳಿಸಿಕೊಳ್ಳುವ ಕಿವಿ ಕೂಡ ಪ್ರಧಾನಿಯವರಿಗಿಲ್ಲ. ಇಂತಹ ಪ್ರಧಾನಿಯನ್ನು ಇಟ್ಟುಕೊಂಡು ನಾವು ಏನು ಮಾಡಬೇಕು ಎಂದು ಹೇಳಿದರು.

ನರೇಂದ್ರ ಮೋದಿ ಪ್ರಧಾನಿಯಾಗಿ ನಾಲ್ಕೂವರೆ ವರ್ಷಗಳು ಕಳೆಯುತ್ತಿದೆ. ಇಷ್ಟು ದಿನಗಳಲ್ಲಿ ದೇಶ ಅತ್ಯಂತ ಕೆಟ್ಟ ದಿನಗಳನ್ನು ಕಂಡಿದೆ. ವಿವಿಧ ತೆರಿಗೆಗಳ ಮೂಲಕ ಜನ ಸಾಮಾನ್ಯರ ಬದುಕಿನ ಮೇಲೆ ಗದಾಪ್ರಹಾರ ನಡೆಸಿದ್ದಾರೆ. ಮನುಷ್ಯತ್ವ ಇದ್ದ ಪ್ರಧಾನಿಯಾಗಿದ್ದರೆ ಈ ರೀತಿಯ ನೀತಿಗಳನ್ನು ಅನುಸರಿಸುತ್ತಿರಲಿಲ್ಲ ಎಂದು ಟೀಕಿಸಿದರು.

ಮತ್ತೊಮ್ಮೆ ಅಧಿಕಾರ ನೀಡಿ, ತೈಲ ಬೆಲೆ ಕಡಿಮೆ ಮಾಡುತ್ತೇನೆ ಎಂದು ಪ್ರಧಾನಿ ನಿನ್ನೆ ಹೇಳಿದ್ದಾರೆ. ನಾಲ್ಕೂವರೆ ವರ್ಷ ನೀವು ಮಾಡಿರುವುದು ಏನು? ಮನುಷ್ಯತ್ವವೇ ಇಲ್ಲದಂತೆ ಪ್ರಧಾನಿ ವರ್ತಿಸುತ್ತಿದ್ದಾರೆ. ಸುಳ್ಳು ಹೇಳಿಕೊಂಡು ಆಡಳಿತ ಮಾಡುತ್ತಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ವ್ಯಕ್ತಿ ಎಂದರೆ ಅದು ಮೋದಿ ಎಂದು ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕಿದೆ. ಸಮಾಜದಲ್ಲಿ ದ್ವೇಷ, ವೈಷಮ್ಯ ಸೃಷ್ಟಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಕೆಡಿಸಲು ಮುಂದಾಗಿದ್ದಾರೆ. ಹೀಗಾಗಿ, ಜನತೆಯ ದಾರಿ ತಪ್ಪಿಸುತ್ತಿರುವ ಬಿಜೆಪಿಗೆ ಮತ್ತೊಂದು ಅವಧಿಗೆ ಯಾವುದೇ ಕಾರಣಕ್ಕೂ ಅಧಿಕಾರ ನೀಡಬಾರದು ಎಂದು ಹೇಳಿದರು.

ಶಾಸಕ ಮುನಿರತ್ನ ಮಾತನಾಡಿ, ನರೇಂದ್ರ ಹೆಸರಿನಲ್ಲೇ ದರಿದ್ರ ಇದೆ. ಮೋದಿಯಿಂದಾಗಿ ದೇಶಕ್ಕೆ ದರಿದ್ರ ಬಂದಿದೆ. ತೈಲ ಬೆಲೆ ಏರಿಕೆಯಿಂದ ಬಡವರಿಗೆ ಉಳಿಗಾಲವಿಲ್ಲದಂತಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಸಚಿವ ಝಮೀರ್ ಅಹಮ್ಮದ್ ಖಾನ್, ಶಾಸಕರಾದ ಎಚ್.ಎಂ.ರೇವಣ್ಣ, ಲಕ್ಷ್ಮಿಹೆಬ್ಬಾಳ್ಕರ್, ಎನ್.ಎ.ಹಾರಿಸ್, ಮಾಜಿ ಶಾಸಕ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News