ತೈಲ ಬೆಲೆ ಏರಿಕೆ ಖಂಡಿಸಿ ಎತ್ತಿನಗಾಡಿಗಳ ಬೃಹತ್ ಮೆರವಣಿಗೆ

Update: 2018-09-10 13:39 GMT

ಬೆಂಗಳೂರು, ಸೆ.10: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‌ನ ಭಾಗವಾಗಿ ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಮೌರ್ಯ ವೃತ್ತದವರೆಗೂ ಕಾಂಗ್ರೆಸ್ ಕಾರ್ಯಕರ್ತರು ಎತ್ತಿನ ಗಾಡಿಗಳ ಬೃಹತ್ ಮೆರವಣಿಗೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಝಮೀರ್ ಅಹಮ್ಮದ್ ಖಾನ್, ಶಾಸಕರಾದ ಎನ್.ಎ. ಹಾರಿಸ್, ಎಚ್.ಎಂ.ರೇವಣ್ಣ ಸೇರಿದಂತೆ ಹಲವು ನಾಯಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರಕಾರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ವಿವಿಧ ಕಡೆಗಳಿಂದ ಬೈಕ್‌ಗಳ ಮೂಲಕ ರ್ಯಾಲಿ ನಡೆಸಿದ ಕಾರ್ಯಕರ್ತರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಪ್ರಮುಖ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚುವ ಮೂಲಕ ಹಾಗೂ ವಾಹನಗಳನ್ನು ತಡೆಯುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಂದಿ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಕೇಂದ್ರ ಸರಕಾರದ ಜನವಿರೋಧಿ ನೀತಿ ಧೋರಣೆಯನ್ನು ಖಂಡಿಸಿದರು. ಕೇಂದ್ರ ಸರಕಾರದ ತಪ್ಪುನೀತಿಗಳಿಂದಾಗಿ ಪೆಟ್ರೋಲ್, ಡಿಸೇಲ್ ಬೆಲೆ ಜನಸಾಮಾನ್ಯರ ಕೈಗೆಟುಕದಂತೆ ದುಬಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ರೇಸ್‌ಕೋರ್ಸ್ ರಸ್ತೆಯ ಸಿ.ರಂಗಸ್ವಾಮಿ ವೃತ್ತದ ಬಳಿ ಐಎನ್‌ಟಿಯುಸಿ ಕಾರ್ಯಕರ್ತರು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ, ಈ ಕಡೆಯಿಂದ ಸಂಚರಿಸುತ್ತಿದ್ದ ವಾಣಿಜ್ಯ ವಾಹನಗಳನ್ನು ತಡೆಯಲು ಮುಂದಾದರು. ಪೊಲೀಸರ ಮಧ್ಯಪ್ರವೇಶದಿಂದಾಗಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ನಾಟೇಕಲ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ರಸ್ತೆಯಲ್ಲಿ ಅಡ್ಡವಾಗಿ ಕಾರುಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ತೆರವು ಮಾಡಲು ಮುಂದಾದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಪೊಲೀಸರ ನಡುವೆ ತಳ್ಳಾಟ-ನೂಕಾಟ ನಡೆಯಿತು. ಕೇಂದ್ರ ಸರಕಾರದ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ನಗರದ ಕೆಂಪೇಗೌಡ ರಸ್ತೆ, ಪ್ಯಾಲೇಸ್ ರಸ್ತೆ, ರೇಸ್‌ಕೋರ್ಸ್ ರಸ್ತೆಗಳಲ್ಲಿ ಸಂಪೂರ್ಣ ಸಂಚಾರವನ್ನು ನಿರ್ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News