ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಭಾರತ್‌ ಬಂದ್‌ಗೆ ಕರೆ: ಆರ್.ಅಶೋಕ್

Update: 2018-09-10 13:49 GMT

ಬೆಂಗಳೂರು, ಸೆ.10: ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಭಾರತ ಬಂದ್‌ಗೆ ಕರೆ ನೀಡಿದ ಕಾಂಗ್ರೆಸ್, ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಒತ್ತಾಯಿಸಿದ್ದಾರೆ.

ಸೋಮವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಭಾರತ್‌ ಬಂದ್ ವಿಫಲವಾಗಿದೆ. ಇದರಿಂದ ಹತಾಶವಾಗಿರುವ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅನೇಕ ಕಡೆ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದೆ ಎಂದು ದೂರಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರಕಾರವೇ ಬಸ್ ಮತ್ತು ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ದು ಪ್ರಜಾತಂತ್ರ ವಿರೋಧಿ ಕ್ರಮ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾದ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಸೇಡು ತೀರಿಸಿಕೊಳ್ಳಲು ಬಂದ್ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ದಾಂಧಲೆಗೆ ಪ್ರಚೋದನೆ ನೀಡಿದ್ದಾರೆ ಎಂದು ಅಶೋಕ್ ದೂರಿದರು.

ಕಾರವಾರದಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದು, ಶೋರೂಂಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಮಂಗಳೂರಿನಲ್ಲಿ ಜ್ಯೋತಿ ವೃತ್ತದಲ್ಲಿ ಯುವ ಕಾಂಗ್ರೆಸ್‌ನ ಮಿಥುನ್ ರೈ ಬೆಂಬಲಿಗರ ದರ್ಪ ನಡೆದಿದೆ. ಬಸ್ಸುಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಅಶೋಕ್ ಆರೋಪಿಸಿದರು.

ಉಡುಪಿಯಲ್ಲಿ ಚೈತ್ರಾ ಕುಂದಾಪುರ ಎನ್ನುವ ನಮ್ಮ ಪಕ್ಷದ ಕಾರ್ಯಕರ್ತೆ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ತೋರಿದ್ದಾರೆ. ಉಡುಪಿ ನಗರ ಬಿಜೆಪಿ ಅಧ್ಯಕ್ಷ, ನಗರಸಭೆ ಸದಸ್ಯ ಪ್ರಭಾಕರ ಪೂಜಾರಿ ತಲೆಗೆ ಪೆಟ್ಟು ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರೇ ಲಾಠಿಚಾರ್ಜ್ ಮಾಡಬೇಕಾಯಿತು ಎಂದು ಅವರು ಹೇಳಿದರು.

ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಕಾರಿಗೆ ಕಲ್ಲು ತೂರಾಟ ನಡೆಸಿ ಗಲಾಟೆ ಮಾಡಲಾಗಿದೆ. ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ. ಸ್ವತಃ ರಮಾನಾಥ ರೈ ಮತ್ತು ಕಾಂಗ್ರೆಸ್‌ನ ಜಿಲ್ಲಾ ಪಂಚಾಯತ್ ಸದಸ್ಯರೇ ಇದರ ಸಾರಥ್ಯವಹಿಸಿದ್ದರು. ಅಂಕೋಲಾದಲ್ಲಿ ಬೇಕರಿ ಬಂದ್ ಮಾಡಿಲ್ಲವೆಂದು ಬೇಕರಿಯಲ್ಲಿದ್ದ ಸಿಹಿತಿನಿಸುಗಳನ್ನು ಕಾಂಗ್ರೆಸ್ ಕಾರ್ಯಕರ್ತರು ನೆಲಕ್ಕೆಸೆದು ಗೂಂಡಾವರ್ತನೆ ತೋರಿದ್ದಾರೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರಮೋದಿ ಜನಪರ ಆಡಳಿತದಿಂದ ಜನರ ಮನಸ್ಸನ್ನು ಗೆದ್ದಿರುವುದರಿಂದ 2019ರ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಮಿತ್ರಕೂಟವು ಹೀನಾಯ ಸೋಲು ಅನುಭವಿಸುವುದು ನಿಶ್ಚಿತವಾಗಿದೆ. ಆದುದರಿಂದಲೇ, ಕಾಂಗ್ರೆಸ್ ಪಕ್ಷ ನಿರಂತರವಾಗಿ ಮೋದಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ. ಬಂದ್ ಕರೆ ನೀಡಿ, ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡಿದ ಕಾಂಗ್ರೆಸ್‌ಗೆ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News