ಬೆಂಗಳೂರು: ಬೆಲೆ ಏರಿಕೆ ವಿರುದ್ಧ ಜೆಡಿಎಸ್ ಪ್ರತಿಭಟನೆ

Update: 2018-09-10 14:22 GMT

ಬೆಂಗಳೂರು, ಸೆ. 10: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಕರೆ ನೀಡಿದ್ದ ಭಾರತ್ ಬಂದ್ ಅನ್ನು ಬೆಂಬಲಿಸಿ ಜೆಡಿಎಸ್‌ನ ನಾಯಕರು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಕೇಂದ್ರ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದ ಪುರಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಬೃಹತ್ ರ್ಯಾಲಿ ನಡೆಸಿದ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ತೈಲ ಬೆಲೆಗಳನ್ನು ಕೂಡಲೇ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮೊದಲು ಪುರಭವನದ ಮುಂಭಾಗ ಗ್ಯಾಸ್ ಸಿಲಿಂಡರ್‌ಗಳನ್ನು ಪ್ರದರ್ಶಿಸಿ ಅಡುಗೆ ಅನಿಲ ಏರಿಕೆಯಿಂದ ಜನರ ಬದುಕು ಬೀದಿಗೆ ಬಿದ್ದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ವಕ್ತಾರ ಶರವಣ, ಪ್ರಧಾನಿ ವೋದಿ ಅಧಿಕಾರಕ್ಕೆ ಬಂದ ನಂತರದಿಂದಲೂ ದೇಶದಲ್ಲಿ ಒಳ್ಳೆ ದಿನಗಳು ಬರಲಿವೆ ಎಂದು ಭಾಷಣ ಮಾಡುತ್ತಿದ್ದಾರೆ. ಇದೀಗ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದೇ ನಿಜವಾದ ಅಚ್ಛೇ ದಿನ್ ಆಗಿದೆ ಎಂದು ಆರೋಪಿಸಿದರು.

ಕೇಂದ್ರ ಸರಕಾರದ ನೀತಿಯಿಂದಾಗಿ ಬಡವರು, ಮಧ್ಯಮ ವರ್ಗದವರು ಬದುಕು ಸಂಕಷ್ಟಕ್ಕೆ ಸಿಲುಕಿದೆ. ಬೆಲೆ ಏರಿಕೆಗಳು ಇಳಿಕೆಯಾಗದಿದ್ದರೆ ಜನರ ಬದುಕು ದುಸ್ಥರವಾಗಲಿದೆ ಎಂದು ಹೇಳಿದರು.

ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಅಶೋಕ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮನಸ್ಸಿಗೆ ಬಂದಂತೆ ಬೆಲೆ ಏರಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಜನ ಸಾಮಾನ್ಯರು ಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರಕಾರ ದಿನದಿಂದ ದಿನಕ್ಕೆ ಬೆಲೆ ಏರಿಕೆ ಮಾಡುತ್ತಿದೆ. ಹೀಗಾಗಿ, ಕೂಡಲೇ ಪೆಟ್ರೋಲ್-ಡಿಸೇಲ್ ಮತ್ತು ಅಡುಗೆ ಅನಿಲ ದರವನ್ನು ಇಳಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ದೇಶದ ಅಭಿವೃದ್ಧಿ, ಜನರ ಬಗ್ಗೆ ದೂರದೃಷ್ಟಿಯಿಲ್ಲದೇ ಪ್ರಧಾನಿ ಮೋದಿ ಆಡಳಿತ ನಡೆಸುತ್ತಿದ್ದಾರೆ. ಸದಾ ವಿದೇಶ ಪ್ರವಾಸದಲ್ಲಿ ಕಾಲಕಳೆಯುವ ಪ್ರಧಾನಿ ಮಾತಿನಲ್ಲೇ ಮನೆ ಕಟ್ಟುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬಿಬಿಎಂಪಿಯ ಜೆಡಿಎಸ್ ಗುಂಪಿನ ನಾಯಕಿ ನೇತ್ರಾನಾರಾಯಣ್ ಮಾತನಾಡಿ, ಕೇಂದ್ರ ಸರಕಾರ ಅನಗತ್ಯವಾಗಿ ಹೆಚ್ಚಿನ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಆ ಮೂಲಕ ಜನರನ್ನು ಆತಂಕಕ್ಕೀಡು ಮಾಡಲಾಗುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News