ಹೆಚ್ಚುತ್ತಿರುವ ಕೆಟ್ಟಸಾಲಗಳಿಗೆ ಬ್ಯಾಂಕುಗಳ ಅತಿ ಆಶಾವಾದ ಮತ್ತು ನೀತಿ ನಿಷ್ಕ್ರಿಯತೆ ಕಾರಣ: ರಘುರಾಮ್ ರಾಜನ್

Update: 2018-09-10 15:19 GMT

ಹೊಸದಿಲ್ಲಿ, ಸೆ.10: ಅನುತ್ಪಾದಕ ಸಾಲ(ಎನ್‌ಪಿಎ)ಗಳು ಹೆಚ್ಚಿರುವುದಕ್ಕೆ ಬ್ಯಾಂಕುಗಳ ಅತಿಯಾದ ಆಶಾವಾದ ಮತ್ತು ನೀತಿ ನಿಷ್ಕ್ರಿಯತೆ ಕಾರಣ ಎಂದು ಮಾಜಿ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರು ಮುರಳಿ ಮನೋಹರ ಜೋಶಿ ನೇತೃತ್ವದ ಅಂದಾಜುಗಳ ಕುರಿತ ಸಂಸದೀಯ ಸಮಿತಿಗೆ ನೀಡಿರುವ ಉತ್ತರದಲ್ಲಿ ದೂರಿದ್ದಾರೆ.

ಬ್ಯಾಂಕುಗಳು ದೊಡ್ಡ ಸಾಲಗಳ ಬಗ್ಗೆ ಅಗತ್ಯ ಗಮನವನ್ನು ವಹಿಸಿರಲಿಲ್ಲ ಮತ್ತು 2008ರ ಆರ್ಥಿಕ ಹಿಂಜರಿಕೆ ಬಳಿಕ ತಮ್ಮ ಬೆಳವಣಿಗೆಯ ಬಗ್ಗೆ ಅವುಗಳ ಅಂದಾಜುಗಳು ಅವಾಸ್ತವಿಕವಾಗಿದ್ದವು ಎಂದು ರಾಜನ್ ಹೇಳಿರುವುದನ್ನು ಆಂಗ್ಲ ಸುದ್ದಿವಾಹಿನಿಯು ಉಲ್ಲೇಖಿಸಿದೆ.

ಸಮರ್ಪಕವಾಗಿ ಮರುಪಾವತಿಯಾಗದ ಸಾಲಗಳು ಅನುತ್ಪಾದಕ ಆಸ್ತಿಗಳಾಗುವುದನ್ನು ತಡೆಯಲು ಬ್ಯಾಂಕುಗಳು ಇನ್ನಷ್ಟು ಸಾಲಗಳನ್ನು ನೀಡಿದ್ದವು ಎಂದೂ ರಾಜನ್ ಸಮಿತಿಗೆ ತಿಳಿಸಿದ್ದಾರೆನ್ನಲಾಗಿದೆ.

ಅನುತ್ಪಾದಕ ಸಾಲಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡುವಂತೆ ಸಮಿತಿಯು ರಾಜನ್ ಅವರನ್ನು ಕೋರಿಕೊಂಡಿತ್ತು.

2016,ಸೆಪ್ಟೆಂಬರ್‌ವರೆಗೆ ಮೂರು ವರ್ಷಗಳಕಾಲ ಆರ್‌ಬಿಐ ಗವರ್ನರ್ ಆಗಿದ್ದ ರಾಜನ್ ಹಾಲಿ ಅಮೆರಿಕದ ಚಿಕಾಗೊ ಬೂತ್ ಸ್ಕೂಲ್ ಆಫ್ ಬಿಜಿನೆಸ್‌ನಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News